ಈದುಲ್ ಫಿತ್ರ್ ದಿನ ಲಾಕ್‌ಡೌನ್ ಸಡಿಲಿಕೆಗೆ ಎಸ್‌ಡಿಪಿಐ ಆಗ್ರಹ

Update: 2020-05-23 08:40 GMT

ಮಂಗಳೂರು, ಮೇ 23: ಈದುಲ್ ಫಿತ್ರ್ ಹಬ್ಬದ ದಿನ (ರವಿವಾರ) ಫಿತ್ರ್ು ಝಕಾತ್ (ದಾನ) ನೀಡಲು ಅಕ್ಕಪಕ್ಕದ ಪ್ರದೇಶಗಳಿಗೆ ತೆರಳಲು ಅನಿವಾರ್ಯವಾಗಿರುವುದರಿಂದ ಲಾಕ್‌ಡೌನ್ ಸಡಿಲಿಸಬೇಕು ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯು ಆಗ್ರಹಿಸಿದೆ.

ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತ್ರ್ ರವಿವಾರ ನಡೆಯಲಿದೆ. ಈ ಮಧ್ಯೆ ಸರಕಾರದ ಆದೇಶದಂತೆ ದ.ಕ ಜಿಲ್ಲಾಡಳಿತವು ಮೇ 23ರ ಸಂಜೆ 7ರಿಂದ ಮೇ 25ರ ಬೆಳಗ್ಗೆ 7ರವರೆಗೆ ಸಂಪೂರ್ಣ ಲಾಕ್‌ಡೌನ್ ಹೇರಿರುವುದು ಖಂಡನೀಯ. ಕೋವಿಡ್-19/ಲಾಕ್‌ಡೌನ್ ಸಂದರ್ಭ ಮುಸ್ಲಿಮರು ಮಸೀದಿಗಳನ್ನು ಬಂದ್ ಮಾಡಿದ್ದಲ್ಲದೆ ಶುಕ್ರವಾರದ ಜುಮಾ ನಮಾಝ್ ಮತ್ತು ಮಸೀದಿಯಲ್ಲಿ ನಡೆಸುವ ರಮಝಾನ್‌ನ ಪವಿತ್ರ ಕರ್ಮಗಳನ್ನೆಲ್ಲ ತ್ಯಜಿಸಿ ಈ ವೈರಸ್ ವಿರುದ್ಧ ಹೋರಾಟ ಮಾಡಲು ಮುಂಚೂಣಿಯಲ್ಲಿ ನಿಂತು ಸಹಕರಿಸಿದ್ದಾರೆ. ಅಲ್ಲದೆ ಸರಕಾರ ಬಟ್ಟೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದರೂ ಮುಸ್ಲಿಂ ಸಮುದಾಯವೇ ಅಂಗಡಿಗಳಲ್ಲಿ ಜನಜಂಗುಳಿ ಜಾಸ್ತಿಯಾಗಿ ವೈರಸ್ ಹರಡಲು ಕಾರಣವಾಗಬಹುದು ಎಂದು ಎಚ್ಚರಿಕೆ ವಹಿಸಿ ಬಟ್ಟೆಬರೆ ಖರೀದಿಸದೆ ಜಾಗೃತಿ ವಹಿಸಿತ್ತು. ಆದರೆ ಇದೀಗ ಸರಕಾರವು ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ರವಿವಾರ ಮುಸ್ಲಿಮರ ಪವಿತ್ರ ಹಬ್ಬ ಇದೆಯೆಂದು ತಿಳಿದೂ ಕೂಡ ಲಾಕ್‌ಡೌನ್ ಸಡಿಲಿಸದಿರುವುದು ಅಕ್ಷಮ್ಯವಾಗಿದೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್‌ಎಚ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News