ಉಡುಪಿ ಜಿಲ್ಲೆಯಲ್ಲಿ ಮೇ 24ರಂದು ಸಂಪೂರ್ಣ ಲಾಕ್‌ಡೌನ್; ಹೊರಗಡೆ ಬಂದರೆ ಲಾಠಿ ರುಚಿ: ಡಿಸಿ ಜಗದೀಶ್ ಎಚ್ಚರಿಕೆ

Update: 2020-05-23 09:16 GMT

ಉಡುಪಿ, ಮೇ 23: ಉಡುಪಿ ಜಿಲ್ಲೆಯಲ್ಲಿ ಮೇ 23ರ ಸಂಜೆ 7 ಗಂಟೆಯಿಂದ ಮೇ 25ರ ಬೆಳಗ್ಗೆ 7 ಗಂಟೆಯವರೆಗೆ ಒಟ್ಟು 36 ಗಂಟೆಗಳ ಸಂಪೂರ್ಣ ಲಾಕ್‌ಡೌನ್ ಇರುವುದರಿಂದ ಯಾವುದೇ ಕಾರಣಕ್ಕೂ ಯಾರೂ ಕೂಡ ಮನೆಯಿಂದ ಹೊರಗಡೆ ಬರಬಾರದು. ಈ ಆದೇಶ ಉಲ್ಲಂಘಿಸಿ ಹೊರಗಡೆ ಬಂದರೆ ಮತ್ತೆ ನಮ್ಮ ಲಾಠಿಗಳು ಮಾತನಾಡಬೇಕಾಗುತ್ತವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಸಭಾಂಗಣದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಪರ್, ಹಾಲು, ಮೆಡಿಕಲ್ ಶಾಪ್‌ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಂಗಡಿ ಮುಂಗ್ಗಟ್ಟುಗಳು ರವಿವಾರ ತೆರೆಯುವಂತಿಲ್ಲ. ಆದರೆ ಸರಕಾರಿ ತುರ್ತು ಸೇವೆಗಳು ಇರುತ್ತವೆ. ಆದುದರಿಂದ ಮುಂದಿನ 36 ಗಂಟೆಗಳಿಗೆ ಬೇಕಾದ ವಸ್ತುಗಳನ್ನು ಇಂದು ಸಂಜೆ ಏಳು ಗಂಟೆಯೊಳಗೆ ಖರೀದಿಸಬೇಕು. ನಂತರ ಯಾರು ಕೂಡ ಅನಾವಶ್ಯಕವಾಗಿ ಹೊರಗಡೆ ಬರಬಾರದು ಎಂದು ಮನವಿ ಮಾಡಿದ್ದಾರೆ.

ಮೇ 24ರಂದು ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ತಹಶೀಲ್ದಾರ್ ನೀಡಿರುವ ಅನುಮತಿಯ ಹಿನ್ನೆಲೆಯಲ್ಲಿ ಅವಕಾಶ ನೀಡಲಾಗಿದೆ. ಅಲ್ಲಿ 50ಕ್ಕಿಂತ ಹೆಚ್ಚು ಜನ ಸೇರಬಾರದು ಮತ್ತು ಮದುವೆಯಲ್ಲಿ ಸರಕಾರದ ಎಲ್ಲ ಷರತ್ತು ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದು ಬಿಟ್ಟು ಉಳಿದ ಎಲ್ಲ ಅವಶ್ಯಕವಲ್ಲದ ಚಟುವಟಿಕೆಯನ್ನು ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News