ಲಾಕ್‌ಡೌನ್ ಸಡಿಲಿಕೆ ಕುರಿತು ಸಚಿವರ ಜೊತೆ ಮಾತುಕತೆ: ಶಾಫಿ ಸಅದಿ

Update: 2020-05-23 09:36 GMT

ಮಂಗಳೂರು, ಮೇ 23: ಪವಿತ್ರ ಈದುಲ್ ಫಿತ್ರ್ ದಿನ (ರವಿವಾರ)ದಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ವಿಧಿಸಿರುವುದರಿಂದ ಮುಸ್ಲಿಮರು ಹಬ್ಬ ಆಚರಿಸಲು ತೊಂದರೆ ಅನುಭವಿಸಲಿದ್ದಾರೆ. ಹಾಗಾಗಿ ಅತ್ಯಂತ ಸರಳವಾಗಿಯೇ ಹಬ್ಬ ಆಚರಿಸುವ ಮುಸ್ಲಿಮರಿಗೆ ಅಂದು ಲಾಕ್‌ಡೌನ್ ಸಡಿಲಿಕೆ ಮಾಡಿ ಸಹಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಾನು ರಾಜ್ಯ ವಕ್ಫ್ ಸಚಿವ ಪ್ರಭು ಚೌಹಾನ್ ಜೊತೆ ಮಾತುಕತೆ ನಡೆಸಿರುವುದಾಗಿ ರಾಜ್ಯ ವಕ್ಫ್ ಮಂಡಳಿಯ ಸದಸ್ಯ ಶಾಫಿ ಸಅದಿ ಬೆಂಗಳೂರು ತಿಳಿಸಿದ್ದಾರೆ.

 ಕರಾವಳಿ ಭಾಗದಲ್ಲಿ ರವಿವಾರವೇ ಈದುಲ್ ಫಿತ್ರ್ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಸೋಮವಾರ ಹಬ್ಬ ಆಚರಿಸಲ್ಪಡುವುದಿದ್ದರೂ ಹಬ್ಬಕ್ಕೆ ಬೇಕಾದ ಸಿದ್ಧತೆಯನ್ನು ರವಿವಾರ ಮಾಡಿಕೊಳ್ಳಲು ಕಷ್ಟವಾಗಬಹುದು. ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಮಾಂಸ ಮತ್ತು ಆಹಾರ ಸಾಮಗ್ರಿಗಳ ಖರೀದಿಸಲು ಸಾಧ್ಯವಾಗದು. ಹಾಗಾಗಿ ರವಿವಾರದ ಲಾಕ್‌ಡೌನನ್ನು ಸಡಿಲಿಸಬೇಕು. ಈ ಹಬ್ಬದಂದು ಫಿತ್ರ್ ಝಕಾತ್ ನೀಡುವುದು ಕಡ್ಡಾಯವಾಗಿದೆ. ಅದಲ್ಲದೆ ಕುಟುಂಬದ ಸದಸ್ಯರನ್ನು ಭೇಟಿ ಮಾಡುವುದು ಕೂಡ ಪುಣ್ಯದಾಯಕವಾಗಿದೆ. ಹಾಗಾಗಿ ರವಿವಾರ ಲಾಕ್‌ಡೌನ್ ಸಡಿಲಿಸಬೇಕು.

ಈ ನಿಟ್ಟಿನಲ್ಲಿ ರಾಜ್ಯ ವಕ್ಫ್ ಸಚಿವ ಪ್ರಭು ಚೌಹಾನ್, ವಕ್ಫ್ ಮಂಡಳಿಯ ಅಧ್ಯಕ್ಷ ಡಾ. ಯೂಸುಫ್, ವಕ್ಫ್ ಸಿಇಒ ಇಸ್ಲಾವುದ್ದೀನ್ ಗಡಿಯಾಲ್ ಹಾಗೂ ಮುಸ್ಲಿಂ ಸಮುದಾಯದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರ ಗಮನ ಸೆಳೆದಿದ್ದೇನೆ ಎಂದು ಶಾಫಿ ಸಅದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News