ಮಂಗಳೂರು ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆಗೆ ಹೈಕೋರ್ಟ್ ತಡೆ

Update: 2020-05-23 09:57 GMT

ಮಂಗಳೂರು, ಮೇ 23: ಕೊರೋನ-ಲಾಕ್‌ಡೌನ್ ಸಂದರ್ಭ ‘ಸುರಕ್ಷಿತ ಅಂತರ’ ಕಾಯ್ದುಕೊಳ್ಳುವ ನೆಪದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗವು ನಗರದ ಹೃದಯ ಸ್ತಂಭದಂತಿರುವ ಸೆಂಟ್ರಲ್ ಮಾರುಕಟ್ಟೆಯನ್ನು ತರಾತುರಿಯಲ್ಲಿ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರ ಮಾಡಿರುವ ಪ್ರಕ್ರಿಯೆಗೂ ರಾಜ್ಯ ಹೈಕೋರ್ಟ್ ಗುರುವಾರ ತಡೆ ನೀಡಿದೆ.

ಹನೀಫ್ ಮಲಾರ್, ಅಮ್ಮಿ ಮಾರಿಪಳ್ಳ, ಇಬ್ರಾಹೀಂ ಬಿಎಫ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆದೂರು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ಇದರೊಂದಿಗೆ ಎ.7ರಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಹೊರಡಿಸಿದ್ದ ‘ಸಾರ್ವಜನಿಕ ಸೂಚನೆ’ಯು ಮಹತ್ವ ಕಳಕೊಂಡಿವೆ. ಅರ್ಜಿದಾರರ ಪವಾಗಿ ನ್ಯಾಯವಾದಿಗಳಾದ ಎ.ಎಸ್.ಪೊನ್ನಣ್ಣ, ಲತೀಫ್ ಬಡಗನ್ನೂರು, ಅಕ್ಬರ್ ಪಾಷಾ ವಾದಿಸಿದ್ದರು.

*ಪ್ರಕರಣದ ವಿವರ: ಹಲವು ವರ್ಷಗಳ ಇತಿಹಾಸವಿರುವ ಸೆಂಟ್ರಲ್ ಮಾರುಕಟ್ಟೆಯನ್ನು ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸುವುದಾಗಿ ಸ್ಥಳೀಯ ಶಾಸಕರ ಸಹಿತ ಇತರ ಜನಪ್ರತಿನಿಧಿಗಳು ಹೇಳಿಕೊಂಡು ಬಂದಿದ್ದರು. ಮನಪಾ ಆಡಳಿತ ಕೂಡ ಇದನ್ನು ಪುನರುಚ್ಚರಿಸುತ್ತಾ ಬಂದಿತ್ತು. ಆದರೆ ಒಂದಲ್ಲೊಂದು ಕಾರಣದಿಂದ ಅದು ನನೆಗುದಿಗೆ ಬಿದ್ದಿತ್ತು. ಈ ಮಧ್ಯೆ ಸೆಂಟ್ರಲ್ ಮಾರುಕಟ್ಟೆಯನ್ನು ಕೆಡವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ನಿರ್ಮಿಸುವ ಮಾತು ಕೂಡ ಕೇಳಿ ಬಂದಿತ್ತು. ಈ ಮಾರುಕಟ್ಟೆಯ ಖಾಯಂ ವ್ಯಾಪಾರಿಗಳಿಗೆ ಮತ್ತು ತಲೆಹೊರೆ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಎಲ್ಲಿ ಎಂಬ ಪ್ರಶ್ನೆಗೆ ಆಡಳಿತ ವರ್ಗದಲ್ಲೂ ಉತ್ತರವಿರಲಿಲ್ಲ.

 ಕೊರೋನ-ಲಾಕ್‌ಡೌನ್ ಸಂದರ್ಭ ‘ಸುರಕ್ಷಿತ ಅಂತರ’ದ ನೆಪದಲ್ಲಿ ಆಡಳಿತ ವರ್ಗವು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಸ್ಥರನ್ನು ಸ್ಥಳಾಂತರಿಸಲು ಮುಂದಾಯಿತು. ಅದರ ಭಾಗವಾಗಿ ಎ.7ರಂದು ಮನಪಾ ಆಯುಕ್ತರು ಆದೇಶವೊಂದನ್ನು ನೀಡಿ ‘ಮಂಗಳೂರು ಮನಪಾ ವ್ಯಾಪ್ತಿಯ ಕಸ್ಬಾ ಬಜಾರ್ ಗ್ರಾಮದ ಸೆಂಟ್ರಲ್ (ತರಕಾರಿ/ಮೀನು) ಹೆಸರಿನ ಎರಡು ಹಳೆಯ ಮಾರುಕಟ್ಟೆಯ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಇದನ್ನು ದುರಸ್ತಿ ಮಾಡಲಾಗದ ಸ್ಥಿತಿಯಲ್ಲಿದೆ. ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ವ್ಯಾಪಾರ ವಹಿವಾಟನ್ನು ಸುಲಭ ಮತ್ತು ಹೆಚ್ಚು ಅನುಕೂಲವಾಗಿಸಲು ಎಲ್ಲಾ ಮೂಲಭೂತ ಆವಶ್ಯಕತೆಯನ್ನು ಒಳಗೊಂಡ ಹೊಸ ಕಟ್ಟಡವನ್ನು ನಿರ್ಮಿಸುವ ಸಲುವಾಗಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಲು ಪಾಲಿಕೆಯು ಕ್ರಮ ಕೈಗೊಂಡಿರುತ್ತದೆ. ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಮತ್ತು ಸುರಕ್ಷಿತ ಅಂತರ ಕಾಪಾಡಲು ಈ ಹಳೆಯ ಕಟ್ಟಡ ಸೂಕ್ತವಲ್ಲ. ಹಾಗಾಗಿ ಇದನ್ನು ಕೆಡವಿ ಆಧುನಿಕ ಸೌಕರ್ಯವನ್ನು ಒಳಗೊಂಡ ಹೊಸ ಕಟ್ಟಡದ ನಿರ್ಮಾಣ ಆವಶ್ಯವಾಗಿದೆ. ಆದ್ದರಿಂದ ಇಂದಿನಿಂದ (ಎ.7) ಈ ಕಟ್ಟಡದಲ್ಲಿ ಯಾವುದೇ ವ್ಯವಹಾರ ಮುಂದುವರಿಸಲು ಅನುಮತಿ ನೀಡುವುದಿಲ್ಲ. ಆದಾಗ್ಯೂ ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದವರು ಬಯಸಿದಲ್ಲಿ ಬೈಕಂಪಾಡಿಯ ಎಪಿಎಂಸಿ ಯಾರ್ಡನ್ನು ಸಂಪರ್ಕಿಸಿ ವ್ಯವಹಾರ ನಡೆಸಬಹುದು’ ಎಂದಿದ್ದರು.

ಆದರೆ, ರಾಜ್ಯ ಹೈಕೋರ್ಟ್ ಎ.7ರಂದು ಹೊರಡಿಸಲಾದ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಹಳೆ ಕಟ್ಟಡದಲ್ಲಿರುವ ತರಕಾರಿ ಮಾರುಕಟ್ಟೆ ಮತ್ತು ಹೊಸ ಕಟ್ಟಡದಲ್ಲಿರುವ ಮೀನು ಮಾರುಕಟ್ಟೆಯ ನೆಲಸಮ ಹಾಗೂ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ವ್ಯಾಪಾರಿಗಳ ಸ್ಥಳಾಂತರ ಪ್ರಕ್ರಿಯೆಗೆ ಹಿನ್ನೆಡೆಯಾಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರ ಪರವಾಗಿ ವಾದಿಸಿರುವ ನ್ಯಾಯವಾದಿ ಲತೀಫ್ ಬಡಗನ್ನೂರು ಮಂಗಳೂರು ಮನಪಾ ಆಯುಕ್ತರಿಗೆ ಜ್ಞಾಪಕ ಓಲೆಯನ್ನು ಕಳುಹಿಸಿ ಇಲ್ಲಿನ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಅಧೀನದ ಅಧಿಕಾರಿಗಳ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

 *ಅಂಗಡಿ ಮಾಲಕರೇ ದುರಸ್ತಿ:

ಈ ಮಾರುಕಟ್ಟೆಯ ಅಂಗಡಿ ಕೋಣೆಗಳ ದುರಸ್ತಿ ಮತ್ತು ಗಾಳಿ ಮಳೆಯಿಂದ ರಕ್ಷಿಸಲು ಅಂಗಡಿಗಳಿಗೆ ಶೆಡ್ (ಇಳಿಜಾರು ಶೀಟ್) ಅಳವಡಿಸುವ ಬಗ್ಗೆ ಪರವಾನಿಗೆ ಹೊಂದಿರುವ ಅಂಗಡಿ ಮಾಲಕರು ಮನಪಾಕ್ಕೆ 2009ರ ಮಾರ್ಚ್ 26ರಂದು ಅರ್ಜಿ ಸಲ್ಲಿಸಿದ್ದರು. ಅದರಂತೆ ಮನಪಾ ಕೆಲವು ಷರತ್ತು ವಿಧಿಸಿ ದುರಸ್ತಿ ಮಾಡಲು ಅನುಮತಿ ನೀಡಿತ್ತು. ಆ ಬಳಿಕ ಇಲ್ಲಿನ ಅಂಗಡಿ ಮಾಲಕರು ಸ್ವತಃ ಲಕ್ಷಾಂತರ ರೂ. ವೆಚ್ಚ ಮಾಡಿ ಅಂಗಡಿ ಕೋಣೆಗಳನ್ನು ದುರಸ್ತಿ ಮಾಡಿದ್ದರು. ಮನಪಾ ಆಯುಕ್ತರು ಕಟ್ಟಡ ನೆಲಸಮ ಅಥವಾ ಬೈಕಂಪಾಡಿಗೆ ಸ್ಥಳಾಂತರ ಆದೇಶ ಹೊರಡಿಸುವ ಮುನ್ನ ಅಂಗಡಿ ಮಾಲಕರು ಖರ್ಚು ಮಾಡಿದ ಹಣವಲ್ಲದೆ ಮುಂಗಡ ಠೇವಣಿಯ ಕುರಿತು ಯಾವುದೇ ಪ್ರಸ್ತಾಪ ಮಾಡದಿರುವ ಬಗ್ಗೆ ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

*ಹೈಕೋರ್ಟ್ ಆದೇಶದ ಪ್ರತಿ ಬಂದಿಲ್ಲ
ಸೆಂಟ್ರಲ್ ಮಾರುಕಟ್ಟೆಗೆ ಸಂಬಂಧಿಸಿ ಹೈಕೋರ್ಟ್‌ನ ಆದೇಶದ ಯಾವುದೇ ಪ್ರತಿಯು ನಮಗೆ ಬಂದಿಲ್ಲ. ಬಂದ ಬಳಿಕ ನಮ್ಮ ನ್ಯಾಯವಾದಿಯ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

*ಎಪಿಎಂಸಿ ಉಪಪ್ರಾಂಗಣ:

ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಉಪಪ್ರಾಂಗಣವಾಗಿ ಸೆಂಟ್ರಲ್ ಮಾರ್ಕೆಟನ್ನು ಈ ಹಿಂದೆಯೊಮ್ಮೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 19.07.2008ರಂದು ಕೃಷಿ ಮಾರಾಟ ಇಲಾಖೆಯು ಅಧಿಸೂಚನೆ ಹೊರಡಿಸಿತ್ತು. ಅದರಂತೆ ಎಪಿಎಂಸಿ ಆಡಳಿತವು 2021ರ ಮಾರ್ಚ್ 31ಕ್ಕೆ ಕೊನೆಗೊಳ್ಳುವಂತೆ ಹಲವು ವ್ಯಾಪಾರಿಗಳಿಗೆ ಲೈಸನ್ಸ್ ಸರ್ಟಿಫಿಕೆಟ್ ನೀಡಿತ್ತು.


*ಸೆಂಟ್ರಲ್ ಮಾರುಕಟ್ಟೆಯ ಹಳೆಯ ಮತ್ತು ಹೊಸ ಕಟ್ಟಡವನ್ನು ನೆಲಸಮ ಮಾಡಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸುವುದಾಗಿ ಹೈಕೋರ್ಟ್‌ಗೆ ಮನಪಾ ತಿಳಿಸಿತ್ತು. ಆದರೆ ಅದು ಎಷ್ಟು ಕೋ.ರೂ. ವೆಚ್ಚದ ಯೋಜನೆ, ನೀಲ ನಕಾಶೆ ಇತ್ಯಾದಿಯ ಬಗ್ಗೆ ಯಾವುದೇ ದಾಖಲೆ ಸಲ್ಲಿಸದಿರುವುದನ್ನು ಉಲ್ಲೇಖಿಸಿ ತಮ್ಮ ಪರ ವಾದಿಸಿದ ನ್ಯಾಯವಾದಿಗಳು ಪ್ರಶ್ನಿಸಿದ್ದರು. ಅದಕ್ಕೆ ಮನಪಾ ಪೂರಕ ದಾಖಲೆ ಸಲ್ಲಿಸದ್ದರಿಂದ ತಡೆಯಾಜ್ಞೆ ಸಿಕ್ಕಿದೆ. ಈ ಮಾರುಕಟ್ಟೆಯಲ್ಲಿ ನೂರಾರು ವ್ಯಾಪಾರಿಗಳು, ಸಾವಿರಾರು ತಲೆಹೊರೆ ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಂಡಿದ್ದರು. ಕೊರೋನ-ಲಾಕ್‌ಡೌನ್ ನೆಪದಲ್ಲಿ ಅಧಿಕಾರಿಗಳು ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಎಕಿ ಬೈಕಂಪಾಡಿಗೆ ಸ್ಥಳಾಂತರಿಸಿದರು. ಆದರೆ ಮೊದಲ ಮಳೆಗೆ ಅಲ್ಲಿನ ವ್ಯಾಪಾರಿಗಳು ಸಾಕಷ್ಟು ತೊಂದರೆ ಅನುಭವಿಸಿದರು. ತಲಪಾಡಿ, ಕೊಣಾಜೆ, ಉಳ್ಳಾಲ ಮತ್ತಿತರ ಪ್ರದೇಶದ ವ್ಯಾಪಾರಿಗಳು, ತಲೆಹೊರೆ ಕಾರ್ಮಿಕರು ಬೈಕಂಪಾಡಿಗೆ ಹೋಗಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿನ ಶಾಸಕರು, ಅಧಿಕಾರಿಗಳು ಇದನ್ನು ಪರಿಗಣಿಸದಿರುವುದು ವಿಪರ್ಯಾಸ ಎಂದು ಅರ್ಜಿದಾರ ಹನೀಫ್ ಮಲಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News