ಮಂಗಳೂರು ವಿವಿಯಲ್ಲಿ ಹಗರಣ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

Update: 2020-05-23 12:12 GMT

ಮಂಗಳೂರು, ಮೇ 23: ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಹರೀಶ್ ಆಚಾರ್ ಸರಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ಲೆಕ್ಕ ಪರಿಶೋಧನಾ ಇಲಾಖೆ ಸಮಗ್ರ ತನಿಖೆ ನಡೆಸಿ ಜ.22ರಂದು ವಿಸ್ತೃತ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ಇಲಾಖಾ ತನಿಖೆಗೆ ಆದೇಶ ನೀಡಿದೆ. ಆದರೆ ಇಲಾಖಾ ತನಿಖೆಯಿಂದ ವರದಿಯಲ್ಲಿ ಕಾಣಿಸಿದ ಪ್ರಕರಣಗಳ ಸಂಪೂರ್ಣ ಸತ್ಯಾ ಸತ್ಯತೆ ಹೊರಗೆ ಬರಲು ಸಾಧ್ಯವಿಲ್ಲ. ಸ್ವತಂತ್ರ ನ್ಯಾಯಾಂಗ ತನಿಖೆಯಿಂದ ಮಾತ್ರ ಈ ಜಟಿಲ ಪ್ರಕರಣಗಳ ಹಿನ್ನೆಲೆ ಬೆಳಕಿಗೆ ಬರಲು ಸಾಧ್ಯ ಎಂದವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲೆಕ್ಕ ಪರಿಶೋಧನಾ ಇಲಾಖೆ ವರದಿಯಲ್ಲಿ ಉಲ್ಲೇಖಿತವಾಗಿರುವ ಏಳು ಪ್ರಕರಣಗಳು 2002ನೇ ಇಸವಿಯಿಂದ ಮೊದಲ್ಗೊಂಡು ಇವೆ. ಈ ಪ್ರಕರಣಗಳಿಗೆ ಸಂಬಂಧಿಸಿ ಅಗತ್ಯ ಕಡತಗಳು ವಿವಿಯಲ್ಲಿದ್ದು ಸರಕಾರ ತಕ್ಷಣ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಿ ಅವುಗಳನ್ನು ವಶಕ್ಕೆ ಪಡೆಯಬೇಕು ಎಂದವರು ಒತ್ತಾಯಿಸಿದ್ದಾರೆ.

ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಲವು ಮಂದಿ ಪ್ರಸ್ತುತ ಆಡಳಿತದ ಉನ್ನತ ಹುದ್ದೆಗಳಲ್ಲಿ ಇದ್ದಾರೆ. 2002 ಮತ್ತು 2013 ನೇಮಕಾತಿಯನ್ವಯ ನೇಮಕಗೊಂಡ ಹಲವಾರು ಮಂದಿ ವಿವಿಯ ಬೇರೆ ಬೇರೆ ಆಡಳಿತಾಂಗದ ಹುದ್ದೆಗಳಲ್ಲಿದ್ದು, ಅವರು ಆಡಳಿತದಲ್ಲಿ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಅವರಿಂದಲೇ ಇಲಾಖಾ ತನಿಖೆ ಮಾಡಿಸುವುದು ಸಮಂಜಸವಲ್ಲ. ಇದರಿಂದ ಸಂಪೂರ್ಣ ಸತ್ಯಾಂಶ ಹೊರ ಬರಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News