ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಕೊರೋನ ಸೋಂಕಿನ ಪರೀಕ್ಷೆಗೆ ಐ.ಸಿ.ಎಮ್.ಆರ್. ಅನುಮೋದನೆ

Update: 2020-05-23 12:38 GMT

ಕೊಣಾಜೆ: ಮಂಗಳೂರಿನ ದೇರಳಕಟ್ಟೆಯಲ್ಲಿರುವ ನಿಟ್ಟೆ ವಿಶ್ವವಿದ್ಯಾನಿಲಯ, ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಪ್ರಯೋಗಾಲಯವು ಗಂಟಲು ಮತ್ತು ಮೂಗಿನ ದ್ರವದಿಂದ ಕೋವಿಡ್-19 ಸೋಂಕು ವೈರಸ್ ಪರೀಕ್ಷೆ ಸೌಲಭ್ಯ ಹೊಂದಿದ್ದು, ಈ ಸೌಲಭ್ಯಕ್ಕೆ ಎನ್.ಎ.ಬಿ.ಎಲ್. ಮಾನ್ಯತೆ ಹಾಗೂ ಐ.ಸಿ.ಎಮ್.ಆರ್. ನ ಅನುಮೋದನೆ ಪಡೆದಿದೆ.

ಈ ಪ್ರಯೋಗಾಲಯದ ಸಿಬ್ಬಂದಿಗಳು ಬೆಂಗಳೂರಿನ ರಾಜ್ಯ ಮಾರ್ಗದರ್ಶಿ ಸಂಸ್ಥೆಯಾದ ನಿಮ್ಹಾನ್ಸ ನಲ್ಲಿ ವಿಶೇಷ ತರಬೇತಿ ಪಡೆದಿರುತ್ತಾರೆ. ಮೈಕ್ರೋ ಬಯೋಲಾಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಅಮಿತ್ ಕೆಲ್ಗಿಯವರನ್ನು ಈ ಪರೀಕ್ಷಾ ಸೌಲಭ್ಯದ ನೋಡಲ್ ಅಧಿಕಾರಿಯಾಗಿ ನೇಮಿಸಿರುವುದಾಗಿ  ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

ಪ್ರಯೋಗಾಲಯದ ನುರಿತ ತಜ್ಞರು SARS COV – 2 RNA ಗುಣಾತ್ಮಕ ಪರೀಕ್ಷೆಯನ್ನು ರಿಯಲ್ ಟೈಮ್ RTPCR ವಿಧಾನದಿಂದ ನಡೆಸಿ ಅದೇ ದಿನದಂದು ವರದಿಯನ್ನು (ರಿಪೋರ್ಟ್) ನೀಡುತ್ತಾರೆ.

ಅನುಮೋದನೆ ಪಡೆದ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ರೋಗಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವ ಸಲುವಾಗಿ ಬೇಕಾಗಿರುವ ವೈರಸ್ Transport medium ಅನ್ನು ಉಚಿತವಾಗಿ ನೀಡುವುದಾಗಿ ಮತ್ತು ಸರಕಾರದ ನಿಯಮಾನುಸಾರವಾಗಿ, ಕೈಗೆಟುಕುವ ದರದಲ್ಲಿ ಪರೀಕ್ಷೆಯನ್ನು ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

ಪರೀಕ್ಷೆಗಾಗಿ ಮಾದರಿಗಳನ್ನು ಕಳುಹಿಸುವ ಸಂಬಂಧವಾಗಿ ಫಿವರ್ ಕ್ಲಿನಿಕ್ (09353904855) ಸಂಪರ್ಕಿಸಬಹುದು ಹಾಗೂ ತಾಂತ್ರಿಕ ಮಾಹಿತಿಗಾಗಿ ನೋಡಲ್ ಅಧಿಕಾರಿ ಡಾ. ಅಮಿತ್ ಕೆಲ್ಗಿ (09449104181) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News