ಕಡಲ್ಕೊರೆತಕ್ಕೆ ಬ್ರೇಕ್ ನೀಡುವ ಪ್ರಯತ್ನ!

Update: 2020-05-23 13:02 GMT

ಮಂಗಳೂರು, ಮೇ 23: ಕೊರೋನ ಸೋಂಕಿನ ಭೀತಿ, ಲಾಕ್‌ಡೌನ್‌ನ ಸಂಕಷ್ಟಗಳ ನಡುವೆಯೂ, ಮೀನುಗಾರ ಸಮುದಾಯದಿಂದ ಕಡಲ್ಕೊರೆತಕ್ಕೆ ಬ್ರೇಕ್ ಹಾಕುವ ಪ್ರಯ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ.

ಪಣಂಬೂರು, ಕುಳಾಯಿ, ತಣ್ಣೀರುಬಾವಿ, ಮತ್ತು ಕೋಡಿಕಲ್ ಈ ನಾಲ್ಕು ಗ್ರಾಮಗಳನ್ನೊಳಗೊಂಡ ನಾಲ್ಕುಪಟ್ಣ ಮೊಗವೀರ ಸಭಾದ ಸದಸ್ಯರು ಕಡಲ್ಕೊರೆತವಾಗುವ ಚಿತ್ರಾಪುರ ಕಡಲ ಕಿನಾರೆ ಪ್ರದೇಶದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಸರಿಯಾಗಿ ಉದ್ಯೋಗವೂ ಇಲ್ಲ. ಇತ್ತ ಮೀನುಗಾರರಿಗೆ ಮೀನುಗಾರಿಕೆಯೂ ಸರಿಯಾಗಿಲ್ಲ. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಮೀನುಗಾರ ಸಮುದಾಯದ ಸದಸ್ಯರು ಕಡಲ ತೀರದ ಮರಳನ್ನು ಗೋಣಿಯಲ್ಲಿ ತುಂಬಿಸಿ ಕಡಲ್ಕೊರೆತವಾಗುವ ಸ್ಥಳದಲ್ಲಿ ರಾಶಿ ಹಾಕುವ ಕಾರ್ಯ ನಡೆಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ 5000 ಗೋಣಿಗಳಲ್ಲಿ ಮರಳು ತುಂಬಿಸುವ ಕಾರ್ಯ ನಡೆದಿದೆ. ನಾಲ್ಕು ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳಿವೆ. ಕುಟುಂಬದ ಸದಸ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಕೆಲ ಗಂಟೆಗಳ ಕಾಲ ಈ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಪ್ರತಿ ಮಳೆಗಾಲದಲ್ಲಿ ಸಮುದ್ರ ಕೊರೆತ ಕಡಲ ತೀರದ ಜನತೆಯನ್ನು ಕಾಡಲಾರಂಭಿಸುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಆಗಲೇಬೇಕು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮತ್ತು ಶಾಸಕರ ಗಮನಕ್ಕೆ ತರಲಾಗಿದ್ದು, ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಪಣಂಬೂರು ಮೊಗವೀರ ಮಹಾಸಭಾದ ಅಧ್ಯಕ್ಷ ಮಾಧವ ಸುವರ್ಣ ತಿಳಿಸಿದ್ದಾರೆ.

ಸುಮಾರು 700 ಮೀಟರ್ ಉದ್ದಕ್ಕೆ ತಡೆಗೋಡೆಯ ಅಗತ್ಯವಿದೆ. ಕಡಲ ನೀರಿಗೆ ಈ ಮರಳ ಗೋಣಿ ಚೀಲಗಳು ಯಾವ ಲೆಕ್ಕಕ್ಕೂ ಇಲ್ಲ. ಆದರೆ ಕಳೆದ ಬಾರಿ ಮಳೆಗಾಲಕ್ಕೆ ಸಾಕಷ್ಟು ತೊಂದರೆ ಆಗಿದೆ. ಲಕ್ಷಾಂತರ ರೂ. ನಷ್ಟವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಕಳೆದ ಬಾರಿಯ ಅಪಾಯ, ತೊಂದರೆಗಳ ಸಂದರ್ಭವೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಸದ್ಯ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಬೇಕಾದರೂ ಸಾಕಷ್ಟು ದಿನಗಳು ಬೇಕು. ಹಾಗಾಗಿ ಮೀನುಗಾರ ಸಮುದಾಯ ನಮ್ಮ ಪ್ರಯತ್ನವಾಗಿ ಈ ಕಾರ್ಯವನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ನಾಲ್ಕು ಪಟ್ಣ ಸಂಯುಕ್ತ ಸಭಾ, ಮೊಗವೀರ ಹೆಲ್ಪ್ ಲೈನ್, ವೀರ ಮಾರುತಿ ವ್ಯಾಯಾಮಶಾಲೆ, ಮಹಾವಿಷ್ಣು ಭಜನಾ ಮಂದಿರ, ಮೊಗವೀರ ಮಹಿಳಾ ಮಂಡಳಿಯವರು ಸೇರಿದಂತೆ ಹಲವು ಮಂದಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಸಾಥ್ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.

‘‘ಈಗಾಗಲೇ 5000 ಗೋಣಿಗಳನ್ನು ಸಿದ್ಧಗೊಳಿಸಿ ಮರಳು ತುಂಬಿಸಲಾಗಿದೆ. ಪ್ರಥಮ ಹಂತದಲ್ಲಿ ಸುಮಾರು 10,000 ಮರಳಿನ ಚೀಲ ಸಿದ್ಧಗೊಳಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕಾರ್ಯ ನಡೆಸಲಾಗುತ್ತದೆ. ಕಳೆದ ವರ್ಷದ ಮಳೆಗಾಲದಲ್ಲಿ ಕಡಲ್ಕೊರೆತದಿಂದಾಗಿ ಚಿತ್ರಾಪುರ ಬಳಿ ಕಡಲಕಿನಾರೆಯ ಕೆಲ ರಸ್ತೆಗಳು ಹಾಳಾಗಿವೆ. ಇದೇ ವೇಳೆ ರಂಗ ಮಂದಿರದ ರಸ್ತೆಯೂ ಹಾನಿಗೀಡಾಗಿದೆ. ಈಗಾಗಲೇ ಸಚಿವರು ಸೇರಿದಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಯೂ ಭೇಟಿ ನೀಡಿ ಸಹಕರಿಸುವ ಭರವಸೆ ನೀಡಿದ್ದಾರೆ. ಪ್ರಸ್ತುತ ನಾವೂ ಕೆಲಸವಿಲ್ಲದೆ ಇರುವುದರಿಂದ ಆ ಸಮಯವನ್ನು ಈ ರೀತಿಯಲ್ಲಿ ವ್ಯಯಿಸಿ ನಮ್ಮಿಂದಾಗುವ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ’’ ಎಂದು ಮಹಾಸಭಾದ ಕಾರ್ಯದರ್ಶಿ ಹಾಗೂ ಚಿತ್ರಾಪುರ ಮಹಾವಿಷ್ಣು ಭಜನಾ ಮಂದಿರದ ಅಧ್ಯಕ್ಷ ಸತೀಶ್ ಸುವರ್ಣ ಅಭಿಪ್ರಾಯಿಸಿದ್ದಾರೆ.

ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ನಾವು ಸುರಕ್ಷತೆಗೂ ಗಮನ ಹರಿಸಬೇಕಾಗಿದೆ. ಹಾಗಾಗಿ ತಲಾ ಐದು ಮಂದಿಯ ಗುಂಪುಗಳು ಸುರಕ್ಷಿತ ಅಂತರ ಕಾಪಾಡಿಕೊಂಡು ಬಿಡುವಿನ ವೇಳೆಯಲ್ಲಿ ಈ ಮರಳು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಸತೀಶ್ ಸುವರ್ಣ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News