ಹೆಜಮಾಡಿ: ಜಾರ್ಖಂಡ್ ಕಾರ್ಮಿಕನ ಅಪಘಾತ ಪ್ರಕರಣಕ್ಕೆ ತಿರುವು

Update: 2020-05-23 15:07 GMT

ಪಡುಬಿದ್ರಿ: ಹೆಜಮಾಡಿಯ ಗುಂಡಿ ರಸ್ತೆಯ ಬಳಿ ಮೋರಿಯೊಂದರಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕ ಸ್ಕೂಟರ್ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. 

ಜಾರ್ಖಂಡ್ ಮೂಲದ ಸದಕತ್ ಅನ್ಸಾರಿ (38) ಎಂಬವರು ಗುರುವಾರ ರಾತ್ರಿ ಹೆಜಮಾಡಿಯ ಗುಂಡಿ ರಸ್ತೆಯ ಮೋರಿಯೊಂದರಲ್ಲಿ ಅಪಘಾತವಾದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ ಪಡುಬಿದ್ರಿ ಪೊಲೀಸರ ತೀವ್ರ ವಿಚಾರಣೆಯ ಬಳಿಕ ಇದೊಂದು ಉದ್ದೇಶಪೂರ್ವಕವಲ್ಲದ ಮಾನವ ಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. 
ಮೃತಪಟ್ಟ ಸದಕತ್ ಅನ್ಸಾರಿ, ಪತ್ನಿ ನಾಲ್ವರು ಮಕ್ಕಳು ಹಾಗೂ ಆತನ ಸಹೋದರನೊಂದಿಗೆ ಹೆಜಮಾಡಿಯ ಎಸ್‍ಎಸ್ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದನು. ಗುರುವಾರ  ರಾತ್ರಿ ಮನೆಯಲ್ಲಿ ಸದಕತುಲ್ಲಾ ಅನ್ಸಾರಿ ಹಾಗೂ ಪತ್ನಿಯ ನಡುವಿನ ವಾಗ್ವಾದ ಉಂಟಾಗಿದ್ದು, ಸದಕತ್ ಅನ್ಸಾರಿ ಪತ್ನಿಯು ಆತನನ್ನು ಬಲವಾಗಿ ದೂಡಿರುವುದರಿಂದ ಮನೆಯಲ್ಲಿಯೇ ಪ್ರಜ್ಞೆ ತಪ್ಪಿ ಬೀಳುವಂತಾಗಿತ್ತು. ಬಳಿಕ ಆತ ಸತ್ತಿರುವನೆಂದು ಭಾವಿಸಿದ ಪತ್ನಿ ಗಂಡನ ಸಹೋದರ ಶಫೀಕ್ ಅನ್ಸಾರಿಯ ನೆರವಿನೊಂದಿಗೆ ಸ್ಕೂಟರ್ ನಲ್ಲಿ ಮೃತದೇಹವನ್ನು ಕೊಂಡೊಯ್ದು ಗುಂಡಿ ರಸ್ತೆಯ ಮೋರಿಯೊಂದರಲ್ಲಿ ಎಸೆದು ಬಂದಿದ್ದಾರೆ ಎನ್ನಲಾಗಿದೆ.

ಆ ಬಳಿಕ ಶಫೀಕ್ ತನ್ನ ಸಹೋದರ ಪೇಟೆಗೆ ಹೋದವ ನಾಪತ್ತೆಯಾಗಿದ್ದಾನೆ ಎಂದು ಸಮೀಪದ ಮನೆಯ ಯುವಕರನ್ನು ಕರೆದುಕೊಂಡು ಹೋಗಿದ್ದನು. ಬಳಿಕ ಮೃತದೇಹ ಅಪಘಾತದ ಸ್ಥಿತಿಯಲ್ಲಿ ಮೋರಿಯಲ್ಲಿ ಕಂಡುಬಂತು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದು, ಈ ವೇಳೆ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಪಡುಬಿದ್ರಿ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತ ವ್ಯಕ್ತಿಯ ಪತ್ನಿ ಹಾಗು ಸಹೋದರ ಪೊಲೀಸರ ವಶದಲ್ಲಿದ್ದಾರೆ. 

ಮಾನವೀಯತೆ ಮೆರೆದ ಡಿವೈಎಸ್‍ಪಿ: ಸದಕತ್ ಅನ್ಸಾರಿಯ ನಾಲ್ಕು ಪುಟಾಣಿ ಮಕ್ಕಳು ಅನಾಥರಾಗಿದ್ದಾರೆ. ಪ್ರಕರಣದ ತನಿಖೆಗಾಗಿ ಮನೆಗೆ ತೆರಳಿದ್ದ ಡಿವೈಎಸ್‍ಪಿ ಭರತ್ ರೆಡ್ಡಿ ಬಳಿ ಸದಕತ್‍ನ ಹಿರಿಯ ಪುತ್ರ ತನ್ನ ತಾಯಿಯನ್ನು ಕರೆದುಕೊಂಡು ಹೋಗಬೇಡಿ ಎಂದು ಅಂಗಲಾಚಿದ್ದು, ಇದನ್ನು ಕಂಡ ಅವರು 10ಸಾವಿರ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ. ಇದೀಗ ಮಕ್ಕಳನ್ನು ಜಾರ್ಖಂಡ್ನಲ್ಲಿರುವ ಕುಟುಂಬದ ಮನೆಗೆ ಕಳುಹಿಸಿಕೊಡುವ ಬಗ್ಗೆ ಚಿಂತನೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News