ಚೀನಾಕ್ಕೆ ಮತ್ತಷ್ಟು ನಿಕಟವಾದ ನೇಪಾಳ

Update: 2020-05-24 06:09 GMT


ಪಿತೋರ್‌ಗಢ, ಮೇ 24: ಭಾರತದ ಜತೆ ಗಡಿ ವಿಚಾರದಲ್ಲಿ ನೇರ ಸಂಘರ್ಷಕ್ಕೆ ಇಳಿದ ನೇಪಾಳ ಇದೀಗ ಚೀನಾಗೆ ಮತ್ತಷ್ಟು ನಿಕಟವಾಗಿದ್ದು, 12 ವರ್ಷಗಳಷ್ಟು ಹಳೆಯ ಗಡಿ ರಸ್ತೆ ಯೋಜನೆಗೆ ಮತ್ತೆ ಚಾಲನೆ ನೀಡಿದೆ.
130 ಕಿಲೋಮೀಟರ್ ಉದ್ದದ ದಾರ್ಚುಲಾ- ಟಿಂಕರ್ ರಸ್ತೆ ಯೋಜನೆ 2008ರಲ್ಲಿ ಅನುಮೋದನೆ ಪಡೆದಿತ್ತು. ಇದು ಟಿಂಕರ್ ಪಾಸ್ ಮೂಲಕ ನೇಪಾಳ- ಚೀನಾ ಗಡಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಲಿದೆ ಎಂದು ಹೇಳಲಾಗಿದೆ. ಈ ರಸ್ತೆಯಲ್ಲಿ ಸುಮಾರು 50 ಕಿಲೋಮೀಟರ್ ಭಾಗ ಭಾರತದ ಗಡಿಯಲ್ಲಿ ಉತ್ತರಾಖಂಡಕ್ಕೆ ಪರ್ಯಾಯವಾಗಿ ಸಾಗಲಿದೆ. ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿರುವುದನ್ನು ನೇಪಾಳ ಅಧಿಕಾರಿಗಳು ದೃಢಪಡಿಸಿದ್ದು, ರಸ್ತೆಯ ಉಳಿದ ಭಾಗ ಪೂರ್ಣಗೊಳಿಸಲು ನೇಪಾಳ ತನ್ನ ಸೇನೆಯ ನೆರವು ಪಡೆಯಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಈ ರಸ್ತೆ ಯೋಜನೆಯಿಂದ ಕೇವಲ ವ್ಯಾಪಾರ ವಹಿವಾಟು ವೃದ್ಧಿಯಾಗುವುದು ಮಾತ್ರವಲ್ಲದೇ ಯಾತ್ರಾರ್ಥಿಗಳು ಮತ್ತು ಪ್ರವಾಸಿಗಳ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ತೀವ್ರ ಕಣಿವೆ ಪ್ರದೇಶ ಮತ್ತು ಕಠಿಣ ಹವಾಮಾನ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ 12 ವರ್ಷಗಳಲ್ಲಿ ಕೇವಲ 43 ಕಿಲೋಮೀಟರ್ ಮಾತ್ರ ಕಾಮಗಾರಿ ಮುಗಿದಿದೆ. ನಿರಂತರ ನಷ್ಟದಿಂದಾಗಿ ಗುತ್ತಿಗೆದಾರ ಕಾಮಗಾರಿ ಕೈಬಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News