ಧಾರ್ಮಿಕ ಕೇಂದ್ರಗಳ ಮೇಲಿನ ನಿರ್ಬಂಧಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ:ಹೈಕೋರ್ಟ್

Update: 2020-05-24 07:46 GMT

 ಹೊಸದಿಲ್ಲಿ,ಮೇ 24:ಧಾರ್ಮಿಕ ಸ್ಥಳಗಳ ಮೇಲೆ ಹೇರಲಾಗಿರುವ ನಿರ್ಬಂಧಗಳು ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿವೆ ಮತ್ತು ಯಾವುದೇ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪಂಜಾಬ್  ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

ವ್ಯವಹಾರ ಮಳಿಗೆಗಳ ಆರಂಭಕ್ಕೆ ಅನುಮತಿ ನೀಡಿರುವ ಮಾದರಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ಸಮಾವೇಶಗಳ ಮೇಲೆ ಹೇರಿರುವ ನಿರ್ಬಂಧಗಳನ್ನು ಸಡಿಲಿಸುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ಶನಿವಾರ ಹೇಳಿರುವ ನ್ಯಾಯಾಲಯವು,ಧಾರ್ಮಿಕ ಸ್ಥಳಗಳ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಸಡಿಲಿಸುವಂತೆ ಕೋರಿ ಮುಬೀನ್ ಫಾರೂಕಿ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ನಿರ್ಬಂಧಗಳಿಂದ ಯಾವುದೇ ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ಯಾವುದೇ ಹಸ್ತಕ್ಷೇಪವುಂಟಾಗಿಲ್ಲ ಮತ್ತು ಎಲ್ಲ ಧರ್ಮಗಳಿಗೆ ಸೇರಿದ ಧಾರ್ಮಿಕ ಕೇಂದ್ರಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಕೊರೋನ ವೈರಸ್ ಹರಡುವಿಕೆ ಸಂದರ್ಭದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ,ಅದೂ ತಾತ್ಕಾಲಿಕ ಕ್ರಮವಾಗಿ,ನಿರ್ಬಂಧಗಳನ್ನು ಹೇರಿರುವುದು ನಿಯಂತ್ರಣವಾಗಿದೆಯೇ ಹೊರತು ನಿಷೇಧವಲ್ಲ. ಗೃಹ ಸಚಿವಾಲಯವು ಹೇರಿರುವ ಈ ನಿರ್ಬಂಧಗಳು ಅರ್ಜಿದಾರರು ಅಥವಾ ಇತರರ ಯಾವುದೇ ಮೂಲಭೂತ ಅಥವಾ ಕಾನೂನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News