ನಾಂದೇಡ್: ಸಾಧು ಸಹಿತ ಇಬ್ಬರ ಹತ್ಯೆ, ಆರೋಪಿಗಾಗಿ ಹುಡುಕಾಟ

Update: 2020-05-24 11:13 GMT

ಮುಂಬೈ, ಮೇ 24: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ರವಿವಾರ ಬೆಳಗ್ಗಿನ ಜಾವ 33ರ ವಯಸ್ಸಿನ ಸಾಧು ಸಹಿತ ಇಬ್ಬರನ್ನು ಹತ್ಯೆಗೈಯ್ಯಲಾಗಿದೆ. ಈ ಇಬ್ಬರ ಕೊಲೆಗೆ ಕಾರಣವಾಗಿದ್ದಾನೆ ಎನ್ನಲಾದ 25ರ ಹರೆಯದ ಮಾದಕ ವ್ಯಸನಿಯೊಬ್ಬನನ್ನು ಸೆರೆ ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ನಗ್‌ಥಾನ ಗ್ರಾಮದಲ್ಲಿರುವ ಶ್ರೀ ನಿರ್ವಾನಿ ಮಠದೊಳಗೆ ಸ್ವಾಮಿ ರುದ್ರಪ್ರತಾಪ್ ಮಹಾರಾಜ್ ಹಾಗೂ ಭಗವಾನ್ ಶಿಂಧೆ(50 ವರ್ಷ)ಶವಗಳನ್ನು ಸ್ಥಳೀಯರು ಪತ್ತೆ ಹಚ್ಚಿದ್ದರು. ಹತ್ಯೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾಂದೇಡ್ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಮಗರ್ ಇಬ್ಬರನ್ನು ಹತ್ಯೆಗೈಯ್ಯಲಾಗಿದೆ ಎಂದು ದೃಢಪಪಡಿಸಿದ್ದಾರೆ.

‘‘ತಲೆಮರೆಸಿಕೊಂಡಿರುವ ಆರೋಪಿ ಸಾಯಿನಾಥ್ ನಗ್‌ಥಾನ ಹಳ್ಳಿಯ ನಿವಾಸಿಯಾಗಿದ್ದು, ಕೊಲೆ ಬಳಿಕ ಪರಾರಿಯಾಗಿದ್ದಾನೆ. ಆತನಿಗಾಗಿ ನಾವು ಹುಡುಕಾಡುತ್ತಿದ್ದೇವೆ. ಸಾಯಿನಾಥ್ ಮಾದಕ ವ್ಯಸನಿಯಾಗಿದ್ದ. ಆತನ ವಿರುದ್ಧ ಈ ಹಿಂದೆ ಕಾರು ಕಳ್ಳತನದ ಆರೋಪ ದಾಖಲಾಗಿತ್ತು. ಸಾಯಿನಾಥ್ ಹಾಗೂ ಕೊಲೆಯಾಗಿರುವ ಶಿಂಧೆ ಶನಿವಾರ ಸಂಜೆ ಒಟ್ಟಿಗೆ ಇದ್ದರು’’ ಎಂದು ವಿಜಯ ಕುಮಾರ್ ತಿಳಿಸಿದ್ದಾರೆ.

  ಪ್ರಾಥಮಿಕ ವರದಿಯ ಪ್ರಕಾರ, ಸಾಯಿನಾಥ್ ಆಶ್ರಮ ಪ್ರವೇಶಿಸಲು ಬಯಸಿದ್ದ. ಆದರೆ, ಶಿಂಧೆ ಇದಕ್ಕೆ ಬೆಂಬಲಿಸಿರಲಿಲ್ಲ. ರವಿವಾರ ರಾತ್ರಿ 1 ಗಂಟೆಗೆ ಶಿಂಧೆಯನ್ನು ಕೋಪದಿಂದ ಕತ್ತುಹಿಸುಕಿ ಕೊಂದ ಸಾಯಿನಾಥ್ ಮತ್ತೆ ಆಶ್ರಮದೊಳಗೆ ಬಂದು ಕೊಠಡಿಯಲ್ಲಿ ನಿದ್ರಿಸುತ್ತಿದ್ದ ಸಾಧುವನ್ನು ಬೆಳಗ್ಗೆ 4 ಗಂಟೆಗೆ ಕತ್ತುಹಿಸುಕಿ ಹತ್ಯೆಗೈದಿದ್ದ. ಈ ವೇಳೆ ನಾಲ್ಕು ಜನರು ಆಶ್ರಮದಲ್ಲಿದ್ದರೂ ಅವರೆಲ್ಲರೂ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದರು. ಸಾಧುವನ್ನು ಕೊಂದ ಬಳಿಕ ಸಾಯಿನಾಥ್ ಪರಾರಿಯಾಗಿದ್ದಾನೆ. ಶಿಂಧೆಯ ಮೃತದೇಹದಲ್ಲಿ ಗಾಯದ ಗುರುತಿಲ್ಲ. ಕೊಲೆ ಮಾಡಲು ಸಾಯಿನಾಥ್ ಬಳಸಿದ್ದ ವಸ್ತುವಿನ ಪತ್ತೆಗಾಗಿ ನಾವು ಹುಡುಕಾಟ ನಡೆಸುತ್ತಿದ್ದೇವೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News