ವಿದೇಶದಿಂದ ಬರುವವರು ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್‌ನಲ್ಲಿರಬೇಕು: ಕೇಂದ್ರ ಮಾರ್ಗಸೂಚಿ

Update: 2020-05-24 12:24 GMT

 ಹೊಸದಿಲ್ಲಿ, ಮೇ 24: ಕೊರೋನ ವೈರಸ್‌ನ ಬಳಿಕ ವಿಧಿಸಲಾಗಿರುವ ಲಾಕ್‌ಡೌನ್‌ನಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರು ಸ್ವದೇಶಕ್ಕೆ ಬಂದ ಬಳಿಕ ಸ್ವಂತ ಖರ್ಚಿನಲ್ಲಿ ಕಡ್ಡಾಯವಾಗಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು. ಆ ಬಳಿಕ ಏಳು ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ರವಿವಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

 ವಿದೇಶದಿಂದ ಬರುವವರಿಗೆ ನಿರ್ದಿಷ್ಟ ಮಾರ್ಗಸೂಚಿಯನ್ನು ಪ್ರಕಟಿಸಿದ ಸಚಿವಾಲಯ, ‘‘ವಿಮಾನವನ್ನು ಹತ್ತುವ ಮೊದಲು ಎಲ್ಲ ಪ್ರಯಾಣಿಕರು ರೋಗ ಪ್ರಸರಣದ ಕನಿಷ್ಠ ಅವಕಾಶವನ್ನು ಖಚಿತಪಡಿಸಲು ನಿಯಮಕ್ಕೆ ಬದ್ಧವಾಗಿರುವುದಾಗಿ ಭರವಸೆ ನೀಡಬೇಕಾಗುತ್ತದೆ. ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗಿನ ಪೋಷಕರು, ಕುಟುಂಬದಲ್ಲಿ ಯಾರಾದರೂ ನಿಧನರಾಗಿದ್ದರೆ, ಗಂಭೀರ ಅನಾರೋೀಗ್ಯ ಸಹಿತ ಕೆಲವು ಸಂದರ್ಭದಲ್ಲಿ ವಿನಾಯಿತಿ ನೀಡಲಾಗುವುದು. ಇವರೆಲ್ಲರೂ 14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಗಿರಬೇಕು.

 ಎಲ್ಲ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ನ್ನು ಡೌನ್‌ಲೋಡ್ ಮಾಡಬೇಕೆಂದು ಸಲಹೆ ನೀಡಲಾಗಿದೆ. ವಿಮಾನ ಅಥವಾ ಹಡಗನ್ನು ಹತ್ತುವ ಸಂದರ್ಭದಲ್ಲಿ ರೋಗಲಕ್ಷಣರಹಿತ ಎಲ್ಲ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ನಂತರ ಹತ್ತಲು ಅನುಮತಿ ನೀಡಲಾಗುತ್ತದೆ. ಸಂಬಂಧಿತ ಏಜೆನ್ಸಿಗಳು ಪ್ರಯಾಣಿಕರಿಗೆ ಟಿಕೆಟ್‌ನ ಜೊತೆಗೆ ಏನು ಮಾಡಬೇಕು, ಮಾಡಬಾರದೆನ್ನ್ನುವ ಪಟ್ಟಿಯೊಂದನ್ನು ಒದಗಿಸುತ್ತಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News