ಕೊರೋನ ವೈರಸ್: ದೇಶದಲ್ಲಿ ಸತತ ಆರನೇ ದಿನ ಹೊಸ ಪ್ರಕರಣಗಳಲ್ಲಿ ದಾಖಲೆ

Update: 2020-05-25 03:43 GMT

ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರವಿವಾರ ಸೋಂಕಿತರ ಸಂಖ್ಯೆಗೆ 6,566 ಹೊಸ ಪ್ರಕರಣಗಳು ಸೇರಿವೆ. ಸತತ ಆರನೇ ದಿನ ದೇಶದಲ್ಲಿ ಹೊಸ ಪ್ರಕರಣಗಳ ಸೇರ್ಪಡೆಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಅಂತೆಯೇ ರವಿವಾರ 153 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 

ಮಾಮೂಲಿನಂತೆ ಮಹಾರಾಷ್ಟ್ರದಲ್ಲಿ ಗರಿಷ್ಠ (3041) ಪ್ರಕರಣಗಳು ದಾಖಲಾಗಿದ್ದು, ಮುಂಬೈ ಮಹಾನಗರದಲ್ಲೇ 1,725 ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 50 ಸಾವಿರ ಮತ್ತು ಮುಂಬೈ ನಗರದಲ್ಲಿ 30 ಸಾವಿರ ದಾಟಿದೆ. ಚಂಡಮಾರುತದಿಂದ ತತ್ತರಿಸಿರುವ ಬಂಗಾಳದಲ್ಲಿ 208 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.

ಬಂಗಾಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,667ಕ್ಕೇರಿದ್ದು, ಅಂಫಾನ್ ಚಂಡಮಾರುತದ ಪರಿಣಾಮವಾಗಿ ಸೋಂಕಿತರ ಸಂಖ್ಯೆ ದಿಢೀರನೇ ಹೆಚ್ಚುವ ಸಾಧ್ಯತೆ ಇದೆ ಎಂದು ವೈರಾಣು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ 26 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರವಿವಾರ ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ ಹೊರತುಪಡಿಸಿದರೆ ತಮಿಳುನಾಡಿನಲ್ಲಿ (765) ಗರಿಷ್ಠ ಪ್ರಕರಣಗಳು ವರದಿಯಾಗಿವೆ. ಚೆನ್ನೈ ಮಹಾನಗರದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ.

ಗುಜರಾತ್‍ನಲ್ಲಿ ಸೋಂಕಿತರ ಸಂಖ್ಯೆ 14 ಸಾವಿರದ ಗಡಿ ದಾಟಿದ್ದು, ಗರಿಷ್ಠ ಸಂಖ್ಯೆಯ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 858ಕ್ಕೇರಿದೆ. ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಗರಿಷ್ಠ ಸಾವು ಇಲ್ಲಿ ಸಂಭವಿಸಿದ್ದು, ಸಾವಿನ ದರ 6.1% ಇದೆ.

ದೆಹಲಿಯಲ್ಲಿ 508 ಹೊಸ ಪ್ರಕರಣ ವರದಿಯಾಗಿದ್ದು, 30 ಮಂದಿ ಬಲಿಯಾಗಿದ್ದಾರೆ. ರಾಜಸ್ಥಾನ (286), ಉತ್ತರ ಪ್ರದೇಶ (254), ಮಧ್ಯಪ್ರದೇಶ (219) ಮತ್ತು ಬಿಹಾರ (180)ದಲ್ಲೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News