ಹಾಕಿ ದಂತಕತೆ ಬಲ್ಬೀರ್ ಸಿಂಗ್ ನಿಧನ

Update: 2020-05-25 04:46 GMT

ಹೊಸದಿಲ್ಲಿ, ಮೇ 25 :ಎರಡು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಶ್ರೇಷ್ಠ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಸೀನಿಯರ್ ಸೋಮವಾರ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಭಾರತದ ಹಾಕಿ ದಂತಕತೆ ಸಿಂಗ್ ಪುತ್ರಿ ಸುಶ್ಬೀರ್ ಹಾಗೂ ಮೂವರು ಪುತ್ರರಾದ ಕನ್ವಲ್‌ಬೀರ್, ಕರಣ್‌ಬೀರ್ ಹಾಗೂ ಗುರ್ಬೀರ್‌ರನ್ನು ಅಗಲಿದ್ದಾರೆ.

ಇಂದು ಬೆಳಗ್ಗೆ 6:30 ಬಲ್ಬೀರ್ ಸಿಂಗ್ ಮೃತಪಟ್ಟಿದ್ದಾರೆ.ಮೇ 8ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಅಭಿಜಿತ್ ಸಿಂಗ್ ತಿಳಿಸಿದ್ದಾರೆ.

ನಾನಾಜಿ ಇಂದು ಬೆಳಗ್ಗೆ ಮೃತಪಟ್ಟರು ಎಂದು ಬಲ್ಬೀರ್ ಸಿಂಗ್ ಮೊಮ್ಮಗ ಕಬೀರ್ ಇಂದು ಬೆಳಗ್ಗೆ ಸಂದೇಶ ಕಳುಹಿಸಿದರು. ಮೂರು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವಿಪರೀತ ಜ್ವರ ಹಾಗೂ ನ್ಯುಮೋನಿಯಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ವೇಳೆ ಮೂರು ಬಾರಿ ಅವರಿಗೆ ಹೃದಯಾಘಾತವಾಗಿತ್ತು.

ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು ಆಧುನಿಕ ಹಾಕಿ ಇತಿಹಾಸದಲ್ಲಿ ಆಯ್ಕೆ ಮಾಡಿರುವ 16 ಲೆಜೆಂಡ್‌ಗಳ ಪೈಕಿ ಭಾರತದಿಂದ ಆಯ್ಕೆಯಾದ ಏಕೈಕ ಹಾಕಿ ಆಟಗಾರನಾಗಿದ್ದ ಬಲ್ಬೀರ್‌ ಸಿಂಗ್ ಜೂನಿಯರ್‌ಗೆ 1957ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

ಒಲಿಂಪಿಕ್ಸ್ ಫೈನಲ್‌ನಲ್ಲಿ ಗರಿಷ್ಟ ಗೋಲು ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.ಈ ದಾಖಲೆ ಈಗಲೂ ಉಳಿದುಕೊಂಡಿದೆ. 1952ರ ಹೆಲ್ಸಿಂಕಿ ಗೇಮ್ಸ್ ಫೈನಲ್‌ನಲ್ಲಿ ನೆದರ್‌ಲ್ಯಾಂಡ್ ವಿರುದ್ಧ ಐದು ಗೋಲುಗಳನ್ನು ಗಳಿಸಿದ್ದ ಸಿಂಗ್ ಭಾರತ 6-1 ಅಂತರದಿಂದ ಜಯ ಸಾಧಿಸಿ ಚಿನ್ನದ ಪದಕ ಜಯಿಸಲು ನೆರವಾಗಿದ್ದರು.

ಬಲ್ಬೀರ್ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದರು. 1948ರಲ್ಲಿ ಲಂಡನ್,1952ರಲ್ಲಿ ಹೆಲ್ಸಿಂಕಿ ಹಾಗೂ 1956ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು. 1956ರ ಒಲಿಂಪಿಕ್ಸ್‌ನಲ್ಲಿ ತಂಡದ ನಾಯಕತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News