ಬೆಳ್ತಂಗಡಿ : ವೇಣೂರು ಗ್ರಾಮದ ಮೃತ ವ್ಯಕ್ತಿಗೂ ಕೊರೋನ ಸೋಂಕು ದೃಢ

Update: 2020-05-25 15:08 GMT

ಮಂಗಳೂರು, ಮೇ 25: ದ.ಕ.ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ಕು ಕೊರೋನ ಸೋಂಕು ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಸೋಂಕಿ ತರ ಸಂಖ್ಯೆ 70ಕ್ಕೇರಿದೆ. ಆ ಪೈಕಿ ದ.ಕ.ಜಿಲ್ಲೆಯ 62 ಮತ್ತು ಉಳಿದ 8 ಪ್ರಕರಣವು ಹೊರ ಜಿಲ್ಲೆ ಮತ್ತು ಹೊರ ಜಿಲ್ಲೆಗೆ ಸೇರಿವೆ.

ಮೇ 18ರಂದು ಮುಂಬೈಯ ದೊಂಬಿವಲಿ ಥಾಣೆಯಿಂದ ಮಂಗಳೂರಿಗೆ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 55ರ ಹರೆಯದ ವ್ಯಕ್ತಿಗೆ ಮತ್ತು ಮುಂಬೈಯ ಪುಣೆಯಿಂದ ಬಂದ 30 ವರ್ಷ ಪ್ರಾಯದ ಯುವಕನಿಗೆ ಹಾಗೂ ಮೇ 20ರಂದು ಮುಂಬೈಯ ಕುರ್ಲಾದಿಂದ ಬಂದ 25ರ ಹರೆಯದ ಯುವಕನಿಗೆ ಕೊರೋನ ಸೋಂಕು ದೃಢಪಟ್ಟಿದೆ.

ಇವರ ಗಂಟಲಿನ ದ್ರವ ಪರೀಕ್ಷೆಯ ವರದಿಯು ಸೋಮವಾರ ಬಂದಿದ್ದು, ಅದರಲ್ಲಿ ಕೋರೋನ ಸೋಂಕು ಪಾಸಿಟಿವ್ ಕಂಡು ಬಂದಿದೆ. ಇವರನ್ನೆಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಮುಂಬೈಯಿಂದ ಜಿಲ್ಲೆಗೆ ಬಂದವರಲ್ಲೇ ಅಧಿಕ ಸಂಖ್ಯೆಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಮೃತ ವ್ಯಕ್ತಿಗೂ ಸೋಂಕು ದೃಢ: ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ 43 ವರ್ಷ ಪ್ರಾಯದ ವ್ಯಕ್ತಿಯೊಬ್ಬರನ್ನು ಮೇ 23ರ ರಾತ್ರಿ 8:47ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ನಗರದ ವೆನ್ಲಾಕ್-ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಂದು ರಾತ್ರಿ ಸುಮಾರು 9:25ಕ್ಕೆ ಮೃತಪಟ್ಟಿದ್ದರು. ಅವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಮವಾರ ಬಂದ ವರದಿಯಲ್ಲಿ ಈ ವ್ಯಕ್ತಿಗೆ ಕೊರೋನ ಸೋಂಕು ಇರುವುದು ದೃಢಗೊಂಡಿದೆ.

ಈ ವ್ಯಕ್ತಿಯ ಸಾವಿನೊಂದಿಗೆ ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ. ಅಂದರೆ ಎ.19ರಂದು ಮಹಿಳೆ ಮತ್ತು ಎ.23 ಹಾಗೂ ಎ.30ರಂದು ಇಬ್ಬರು ವೃದ್ಧೆಯರು, ಮೇ 13ರಂದು ಮಹಿಳೆ, ಮೇ 14ರಂದು ವೃದ್ಧೆ ಸಹಿತ ಒಟ್ಟು ಐದು ಮಂದಿ ಮೃತಪಟ್ಟಿದ್ದರು. ಮೇ 21ರಂದು 55 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬಳಿಕ ಬಂದ ಅವರ ಗಂಟಲ ದ್ರವದ ಪರೀಕ್ಷೆಯಲ್ಲಿ ಕೊರೋನ ಪಾಸಿಟಿವ್ ಪಾಸಿಟಿವ್ ಕಂಡು ಬಂದಿತ್ತು. ಇದೀಗ ವೇಣೂರಿನ ವ್ಯಕ್ತಿಯ ಸಾವಿನ ಬಳಿಕ ಬಂದ ಗಂಟಲಿನ ದ್ರವದ ಮಾದರಿಯ ವರದಿಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದ ಕಾರಣ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ 7ಕ್ಕೇರಿದೆ.

ರವಿವಾರ 1 ಪ್ರಕರಣ ಪತ್ತೆ: ದ.ಕ.ಜಿಲ್ಲೆಯಲ್ಲಿ ರವಿವಾರ 1 ಪ್ರಕರಣ ಪತ್ತೆಯಾಗಿತ್ತು. ವಿಟ್ಲ ಠಾಣೆಯ 42ರ ಹರೆಯದ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತ ಪೊಲೀಸ್ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್‌ಗೆ ಮುನ್ನ ವಿಟ್ಲ ಪೊಲೀಸ್ ಠಾಣೆಗೆ ಬಂದಿದ್ದು ಈತನಿಂದಲೇ ಪೊಲೀಸ್ ಕಾನ್‌ಸ್ಟೇಬಲ್‌ಗೆ ಸೋಂಕು ತಗುಲಿದೆ ಎನ್ನಲಾಗಿದೆ.

20 ಮಂದಿ ಕ್ವಾರಂಟೈನ್‌ಗೆ: ವಿಟ್ಲ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ಗೆ ಕೊರೋನ ಸೊಂಕು ತಗುಲಿದ ಹಿನ್ನೆಲೆಯಲ್ಲಿ ಠಾಣೆಯ ಸುಮಾರು 13 ಸಿಬ್ಬಂದಿಯ ಸಹಿತ 20 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ನೇತೃತ್ವದಲ್ಲಿ ಸಿಬ್ಬಂದಿಗಳು ವಿಟ್ಲ ಠಾಣೆಯನ್ನು ಸ್ಯಾನಿಟೈರಸರ್ ನಡೆಸಿ ಸ್ವಚ್ಛ ಮಾಡುವ ಕಾರ್ಯ ನಡೆಸಲಾಗಿದೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೇದಾವತಿ ನೇತೃತ್ವದ ತಂಡ ಪ್ರಾಥಮಿಕ ಸಂಪರ್ಕಕ್ಕೆ ಬಂದ ವಿಟ್ಲ ಉಪನಿರೀಕ್ಷಕರ ಸಹಿತ 13 ಸಿಬ್ಬಂದಿ ಹಾಗೂ ನೇರ ಸಂಪರ್ಕಕ್ಕೆ ಬಂದ 7 ಮಂದಿ ಹೊರಗಿನವರನ್ನು ಕ್ವಾರಂಟೈನ್ ಮಾಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News