ಕಲ್ಯಾಣ ಕರ್ನಾಟಕದಲ್ಲಿ 150ಕ್ಕೂ ಅಧಿಕ ಬಾಲ್ಯವಿವಾಹ ತಡೆ

Update: 2020-05-26 10:59 GMT

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಜನರು ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದರೆ, ಇತ್ತ ಕೆಲವರು ಬಾಲ್ಯವಿವಾಹ ನಡೆಸಲು ಮುಂದಾಗುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದಲ್ಲಿ 60 ದಿನಗಳಲ್ಲಿ ಬಾಲ್ಯವಿವಾಹ ಸಂಬಂಧ 1098 ಚೈಲ್ಡ್ ಲೈನ್‌ಗೆ 525 ಕರೆಗಳು ಬಂದಿವೆ!

ಬಾಲ್ಯವಿವಾಹವು ಸಾಮಾಜಿಕ ಪಿಡುಗಾಗಿದ್ದು, ಮಾ. 24 ರಿಂದ ಮೇ 15ರವರೆಗೆ ಚೈಲ್ಡ್ ಲೈನ್‌ಗೆ ಸಾವಿರಾರು ಕರೆಗಳು ಬಂದಿದ್ದು, ಅದರಲ್ಲಿ ಬಾಲ್ಯವಿವಾಹ ಸಂಬಂಧ 525 ಕರೆಗಳು ಬಂದಿವೆ. ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಚೈಲ್ಡ್ ಲೈನ್, ಪೊಲೀಸ್ ಇಲಾಖೆ ಸೇರಿ ವಿವಿಧ ಅಧಿಕಾರಿಗಳು ತೆರಳಿ ಪೋಷಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ತಲುಪುವುದರಲ್ಲಿ ಕೆಲವೆಡೆ ಮದುವೆಯಾಗಿದ್ದು, ವಧು, ವರನನ್ನು ವಶಕ್ಕೆ ಪಡೆದು ಪೋಷಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ವಿವಾಹಕ್ಕೆ ಹೆಚ್ಚಿನ ಮುಹೂರ್ತಗಳಿದ್ದು, ಇಂತಹ ಸಂದರ್ಭದಲ್ಲಿ ಲಾಕ್‌ಡೌನ್ ೋಷಣೆಯಾಗಿದೆ. ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಅನುಮತಿ ಇಲ್ಲದಂತಾಗಿದೆ. ಬಹುತೇಕ ಕಡೆಗಳಲ್ಲಿ ಮದುವೆಗಳನ್ನು ಅನೇಕರು ಮುಂದೂಡಿದ್ದಾರೆ. ಆದರೂ ಲಾಕ್‌ಡೌನ್ ಸಂದರ್ಭದಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಬಾಲ್ಯವಿವಾಹಗಳನ್ನು ನಡೆಸುತ್ತಿದ್ದಾರೆ.

ಲಾಕ್‌ಡೌನ್ ಹಿನ್ನೆಲೆ ಹೆಚ್ಚಿನ ಜನರು ಬಾರದಿರುವುದು, ಅಧಿಕಾರಿಗಳು ತಮ್ಮ ಕೆಲಸದಲ್ಲಿಯೇ ನಿರತರಾಗಿರಲಿದ್ದು, ಈ ವೇಳೆ ಬಾಲ್ಯವಿವಾಹ ಮಾಡಿದರೆ ಹಣವೂ ಹೆಚ್ಚಾಗಿ ಖರ್ಚಾಗುವುದಿಲ್ಲ. ಹಾಗೆಯೇ ಕಾನೂನು ತೊಡಕುಗಳು ಇರುವುದಿಲ್ಲ ಎಂಬ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯವಿವಾಹ ನಡೆಯುತ್ತಿವೆ ಎಂದು ಚೈಲ್ಡ್ ಲೈನ್ ಸಿಬ್ಬಂದಿ ತಿಳಿಸಿದ್ದಾರೆ.

ಕೊರೋನ ಹಿನ್ನೆಲೆ ಸಭೆ ರದ್ದು: ಬಾಲ್ಯವಿವಾಹವನ್ನು ಪರಿಣಾಮಕಾರಿಯಾಗಿ ತಡೆಯಲು ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, 2 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಆದರೆ, ಕೊರೋನ ಹಿನ್ನೆಲೆ ಸಭೆಗಳು ನಡೆದಿಲ್ಲ.

ಕಲ್ಯಾಣ ಕರ್ನಾಟಕದಿಂದ ಹೆಚ್ಚು ಕರೆಗಳು: 1098 ಚೈಲ್ಡ್ ಲೈನ್‌ಗೆ ಬಾಲ್ಯವಿವಾಹಕ್ಕೆ ಸಂಬಂಧಿಸಿ ಕಲ್ಯಾಣ ಕರ್ನಾಟಕದಿಂದಲೇ ಅಧಿಕ ಕರೆಗಳು ಬಂದಿವೆ. ಲಾಕ್‌ಡೌನ್ ಅವಧಿಯಲ್ಲಿ 525 ಕರೆಗಳಲ್ಲಿ ಅರ್ಧಕ್ಕಿಂತ ಅಧಿಕ ಕರೆಗಳು ಕಲ್ಯಾಣ ಕರ್ನಾಟಕ ಭಾಗದಿಂದ ಬಂದಿರುವುದು ಅಚ್ಚರಿ ಮೂಡಿಸಿದೆ.

ಬಳ್ಳಾರಿಯಲ್ಲಿ 72 ಬಾಲ್ಯವಿವಾಹಗಳಿಗೆ ತಡೆ

ಮಾ.24ರಿಂದ ಈವರೆಗಿನ ಲಾಕ್‌ಡೌನ್ ಸಂದರ್ದಲ್ಲಿ ಕಲ್ಯಾಣ ಕರ್ನಾಟಕದಲ್ಲಿ 150ಕ್ಕೂ ಅಧಿಕ ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಬಳ್ಳಾರಿ 72, ಕೊಪ್ಪಳ 8, ಯಾದಗಿರಿ 7, ಕಲಬುರಗಿಯಲ್ಲಿ 7 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಹಾಗೆಯೇ ಚಿತ್ರದುರ್ಗ 14, ಬೆಳಗಾವಿ 4, ದಾವಣಗೆರೆ 14, ಬಾಗಲಕೋಟೆ 5, ಮೈಸೂರು 11 ಬಾಲ್ಯವಿವಾಹ ತಡೆಯಲಾಗಿದೆ. ಲಾಕ್‌ಡೌನ್ ಸಂದರ್ದಲ್ಲಿಯೇ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಳವಾದ ಆರೋಪಗಳು ಬಂದ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿಲ್ಲೆಯ ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಿ ಆದೇಶ ಹೊರಡಿಸಿ

ಮಕ್ಕಳ ಹಕ್ಕುಗಳ ರಕ್ಷಣೆಗೆ ಸಹಾಯವಾಣಿ ಸ್ಥಾಪನೆ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೋವಿಡ್-19 ಅವಧಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳ, ಶೋಷಣೆ, ಮಕ್ಕಳ ಸಾಗಣೆ, ಮಕ್ಕಳ ಮಾರಾಟ, ಮಕ್ಕಳು ಕಾಣೆಯಾಗುವುದು ಮತ್ತು ಶಾಲೆಗಳಿಗೆ ಸಂಬಂಧಿಸಿದ ದೂರುಗಳಿಗಾಗಿ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ 080-47181177 ಸಂಪರ್ಕಿಸಬಹುದು.

ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯವಿವಾಹ ಪ್ರಕರಣ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಅಪೌಷ್ಟಿಕತೆಯಿಂದ ನವಜಾತ ಶಿಶುಗಳ ಮರಣ ಸಂಖ್ಯೆ ಅಧಿಕವಾಗಿದೆ. ಇದರ ನಡುವೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ.

-ಡಾ. ಅಂತೋಣಿ ಸೆಬಾಸ್ಟಿಯನ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News