‘ಮಸೀದಿಗಾಗಿ ಹಿಂದೂ ಬಾಲಕನ ಬಲಿ’ ಎಂದು ಸುಳ್ಳು ಹೇಳಿ ಇದೀಗ ಬಾಲಕನ ತಂದೆ ‘ಸುಳ್ಳುಗಾರ’ ಎನ್ನುತ್ತಿರುವ OpIndia

Update: 2020-05-26 14:34 GMT

ಹೊಸದಿಲ್ಲಿ: ಬಿಹಾರದ ಗೋಪಾಲಗಂಜ್ ಜಿಲ್ಲೆಯ ಕಟೈಯಾ ಗ್ರಾಮದಲ್ಲಿ ಬಾಲಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆಗೆ ಕೋಮುಬಣ್ಣ ಹಚ್ಚಲು ಪ್ರಯತ್ನಿಸಿದ್ದ ವೆಬ್ ಸೈಟ್ OpIndia ಈಗ ತನ್ನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡ ಬೆನ್ನಿಗೇ ಉಲ್ಟಾ ಹೊಡೆದಿದೆ.

ತನಗೆ ತಾನೇ ಕ್ಲೀನ್ ಚಿಟ್ ಕೊಟ್ಟುಕೊಳ್ಳುವ ಪ್ರಯತ್ನದಲ್ಲಿ ಅದು ಮೃತ ಬಾಲಕನ ತಂದೆ ರಾಜೇಶ್ ಜೈಸ್ವಾಲ್ ಅವರ ಮೇಲೆ ಗೂಬೆ ಕೂರಿಸಲು ಮುಂದಾಗಿದೆ. ತನ್ನ ಮಗನ ಸಾವಿನ ಕುರಿತಂತೆ ಜೈಸ್ವಾಲ್ ತನಗೆ ಸುಳ್ಳು ಮಾಹಿತಿಯನ್ನು ನೀಡಿದ್ದರು ಎಂದು OpIndia ಆರೋಪಿಸಿದೆ.

ಮಸೀದಿಗಾಗಿ ರೋಹಿತ್(15) ಎಂಬ ಬಾಲಕನನ್ನು ಬಲಿ ನೀಡಲಾಗಿದೆ ಎಂಬ ಸುದ್ದಿಯನ್ನು ಪ್ರಕಟಿಸುವ ಮೂಲಕ ವಿವಾದ ಸೃಷ್ಟಿಸಿದ್ದ OpIndia ತನ್ನ ಸರಣಿ ವರದಿಗಳುದ್ದಕ್ಕೂ ಇದೇ ಆರೋಪವನ್ನು ಮಾಡುತ್ತಲೇ ಬಂದಿತ್ತು. ಬಾಲಕ ನೀರಿನಲ್ಲಿ ಮುಳುಗಿ ಸತ್ತಿರುವುದನ್ನು ಮರಣೋತ್ತರ ಪರೀಕ್ಷೆ ವರದಿ ಮತ್ತು ಪೊಲೀಸರ ತನಿಖೆ ಸಾಬೀತುಗೊಳಿಸಿದ್ದು,ಇದು OpIndiaವನ್ನು ಮುಜುಗರಕ್ಕೆ ಸಿಲುಕಿಸಿದೆ.

ಬಾಲಕನ ಸಾವಿನ ಕುರಿತು ವರದಿಗಾಗಿ ತನ್ನ ಸಂಪಾದಕರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಬಾಲಕನ ತಂದೆಯ ಹೇಳಿಕೆಗಳನ್ನು ನಂಬಿದ್ದು ತನ್ನ ಸಂಪಾದಕರ ಏಕೈಕ ತಪ್ಪಾಗಿದೆ ಎಂದು OpIndiaದ ಸಿಇಒ ರಾಹುಲ್ ರೋಷನ್ ಹೇಳಿಕೊಂಡಿದ್ದಾರೆ. ಇದರ ಜಾಡು ಹಿಡಿದು ಹೊರಟಿದ್ದ ಸುದ್ದಿ ಜಾಲತಾಣ altnews.in ರಾಹುಲ್ ಅವರ ಈ ಹೇಳಿಕೆಯು ಸಹ ನಿಜವಲ್ಲ ಮತ್ತು ಸಾಕ್ಷಾಧಾರಗಳು ಬೇರೆಯದನ್ನೇ ಹೇಳುತ್ತಿದ್ದರೂ OpIndia ಸುಳ್ಳು ವರದದಿಗಳನ್ನೇ ಉತ್ತೇಜಿಸಿತ್ತು ಎನ್ನುವುದನ್ನು ಬಯಲುಗೊಳಿಸಿದೆ.

ಮೇ 17ರ ತನ್ನ ವರದಿಯಲ್ಲಿ OpIndia ಜೈಸ್ವಾಲ್ ಹೇಳಿಕೆಯ ಒಂದು ಭಾಗವನ್ನಷ್ಟೇ ಪ್ರಕಟಿಸಿತ್ತು ಮತ್ತು ತನ್ನ ಮಗನನ್ನು ಮಸೀದಿಯಲ್ಲಿ ಬಲಿ ನೀಡಲಾಗಿದೆ ಎನ್ನುವುದು ಈ ಭಾಗವಾಗಿತ್ತು. ಮೇ 9ರಂದು OpIndia ಜೊತೆ ಮಾತನಾಡಿದ್ದ ಸಂದರ್ಭ ಜೈಸ್ವಾಲ್ ಮಸೀದಿಯಲ್ಲಿ ಬಲಿಯ ಬಗ್ಗೆ ಮಾತನಾಡಿದ್ದರು. ಮೇ 14ರಂದು OpIndia ಜೊತೆ ಮಾತನಾಡಿದಾಗ ಮಸೀದಿಯಲ್ಲಿ ಬಲಿ ಎಂದು ತಾನು ಖಚಿತವಾಗಿ ಹೇಳಿರಲಿಲ್ಲ, ಕೇವಲ ಶಂಕೆಯನ್ನು ಮಾತ್ರ ವ್ಯಕ್ತಪಡಿಸಿದ್ದೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈ ಹೇಳಿಕೆಯ ಬಗ್ಗೆ OpIndia ತನ್ನ ಮೇ 17ರ ವರದಿಯಲ್ಲಿ ಚಕಾರವೆತ್ತಿರಲಿಲ್ಲ.

ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ. OpIndia ಜೈಸ್ವಾಲ್ ಜೊತೆ ಮಾತುಕತೆಯ ಸಂಪೂರ್ಣ ಆಡಿಯೊವನ್ನು ಮಂಡಿಸಿರಲಿಲ್ಲ. ಅದನ್ನು ತುಣುಕುಗಳಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಎರಡನೆಯದಾಗಿ ಮೇ 9 ಮತ್ತು ಮೇ 14ರ ನಡುವೆ OpIndia ಎಷ್ಟು ಬಾರಿ ಜೈಸ್ವಾಲ್ ಜೊತೆ ಮಾತನಾಡಿತ್ತು?, ಈ ಅವಧಿಯಲ್ಲಿ ಅದು ರೋಹಿತ್ ಸಾವಿನ ಕುರಿತು ಕನಿಷ್ಠ ಐದಾರು ಲೇಖನಗಳನ್ನು ಪ್ರಕಟಿಸಿತ್ತು. ರೋಹಿತ್‌ನನ್ನು ಮಸೀದಿಯಲ್ಲಿ ಕೊಲೆ ಮಾಡಲಾಗಿದೆ ಎಂದೇ ಜೈಸ್ವಾಲ್ ಸದಾ ಹೇಳಿಕೊಂಡೇ ಬಂದಿದ್ದರೇ?, ಮೇ 9ರ ನಂತರವೂ ಅವರು ಹೀಗೆಯೇ ಪ್ರತಿಪಾದಿಸಿದ್ದರೇ?, ಇದು ಒಪಿಇಂಡಿಯಾ ಮರಣೋತ್ತರ ಪರೀಕ್ಷೆಯ ವರದಿ ಸುಳ್ಳು ಎಂದು ಘೋಷಿಸಲು ಕಾರಣವಾಗಿತ್ತೇ?, ಈ ಯಾವುದೇ ಪ್ರಶ್ನೆಗೆ ಸ್ಪಷ್ಟವಾದ ಉತ್ತರಗಳಿಲ್ಲ ಎನ್ನುವುದನ್ನು ಆಲ್ಟ್‌ನ್ಯೂಸ್ ಡಾಟ್ ಇನ್‌ನ ತನಿಖಾ ವರದಿಯು ಬೆಟ್ಟು ಮಾಡಿದೆ.

ಆಲ್ಟ್ ನ್ಯೂಸ್ ತಂಡವೂ ಜೈಸ್ವಾಲ್ ಜೊತೆ ಮಾತನಾಡಿತ್ತು. ಈ ವೇಳೆ ಅವರು ತನ್ನ ಮಗನನ್ನು ಮಸೀದಿಯಲ್ಲಿ ಬಲಿ ನೀಡಲಾಗಿದೆ ಎಂದು ಆರೋಪಿಸಿರಲಿಲ್ಲ. ರೋಹಿತ್ ಸಾವಿನ ಹಿಂದಿನ ಸತ್ಯ ಹೊರಗೆ ಬರಬೇಕು ಎನ್ನುವುದೊಂದೆ ತನ್ನ ಬಯಕೆ ಎಂದು ಸ್ಪಷ್ಟಪಡಿಸಿದ್ದರು. ತನ್ನ ಪುತ್ರನ ಸಾವಿನ ಘಟನೆ ಹಿಂದು-ಮುಸ್ಲಿಂ ಕೋನವನ್ನು ಹೊಂದಿರಲಿಲ್ಲ ಎಂದೂ ಆತ ಹೇಳಿದ್ದರು. ಆದರೆ OpIndia ಮಾತ್ರ ಘಟನೆಗೆ ಕೋಮುಬಣ್ಣ ನೀಡಲು ಬಹಳವಾಗಿ ಪ್ರಯತ್ನಿಸಿತ್ತು. ಇದೇ ಕಾರಣದಿಂದ ಈಗ ಅದರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಅದು ಜೈಸ್ವಾಲ್ ಸುಳ್ಳು ಹೇಳಿದ್ದರು ಮತ್ತು ಅದನ್ನು ನಂಬಿ ತಾನು ಅದನ್ನು ಪ್ರಕಟಿಸಿದ್ದೆ ಎನ್ನುವ ಮೂಲಕ ಹೊಣೆಯನ್ನು ಜೈಸ್ವಾಲ್ ಹೆಗಲಿಗೆ ವರ್ಗಾಯಿಸುವ ಹವಣಿಕೆಯಲ್ಲಿದೆ.

ರೋಹಿತ್ ಸಾವಿಗೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳು ಮುಸ್ಲಿಮರು ಎಂದು OpIndia ತನ್ನ ವರದಿಯಲ್ಲಿ ಹೇಳಿತ್ತು. ಆದರೆ ಆರಂಭಿಕ ವರದಿಗಳು ಮತ್ತು ಜೈಸ್ವಾಲ್ ಹೇಳಿಕೆಗಳು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಓರ್ವ ಅಪ್ರಾಪ್ತ ವಯಸ್ಕ ಬಾಲಕ ಹಿಂದು ಆಗಿದ್ದಾನೆ ಎನ್ನುವುದನ್ನು ಸ್ಪಷ್ಟಪಡಿಸಿವೆ. ಈ ಬಾಲಕನೇ ಅಂದು ರೋಹಿತ್‌ನನ್ನು ನೀರಿನಲ್ಲಿ ಆಡಲು ಮನೆಯಿಂದ ಹೊರಗೆ ಕರೆದೊಯ್ದಿದ್ದ. ಆದರೆ OpIndiaದ ವರದಿಯಲ್ಲಿ ಇದರ ಉಲ್ಲೇಖವೇ ಇಲ್ಲ ಎಂದು ಆಲ್ಟ್‌ನ್ಯೂಸ್ ತನಿಖೆಯು ಬೆಟ್ಟು ಮಾಡಿದೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News