ಮಿಡತೆಗಳ ದಾಳಿಗೆ ಪೂರ್ವ ಮಹಾರಾಷ್ಟ್ರ ತತ್ತರ: ಮಥುರಾ, ದಿಲ್ಲಿಗಳಲ್ಲಿ ಕಟ್ಟೆಚ್ಚರ

Update: 2020-05-26 14:48 GMT

ಹೊಸದಿಲ್ಲಿ,ಮೇ 26: ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಈಗಾಗಲೇ ಹಾವಳಿಯೆಬ್ಬಿಸಿರುವ ಮಿಡತೆಗಳು ಈಗ ದೇಶದ ಇನ್ನಷ್ಟು ಭಾಗಗಳಿಗೆ ಲಗ್ಗೆಯಿಟ್ಟಿವೆ. ಮಿಡತೆಗಳ ದಂಡು ಪೂರ್ವ ಮಹಾರಾಷ್ಟ್ರಕ್ಕೆ ನುಗ್ಗಿದ್ದು, ಅಲ್ಲಿಯ ನಾಲ್ಕೈದು ಗ್ರಾಮಗಳು ಎಲ್ಲ ಬಗೆಯ ಸಸ್ಯಗಳು ಮತ್ತು ಬೆಳೆದು ನಿಂತ ಪೈರುಗಳನ್ನು ಭಕ್ಷಿಸುವ ಈ ಕೀಟಗಳ ಹಾವಳಿಯಿಂದಾಗಿ ಕಂಗಾಲಾಗಿವೆ.

ಮಹಾರಾಷ್ಟ್ರದಲ್ಲಿ ಕೃಷಿ ಇಲಾಖೆಯು ಈ ವಲಸಿಗ ಮಿಡತೆಗಳಿಂದ ಬೆಳೆಗಳು ಮತ್ತು ಸಸ್ಯಗಳನ್ನು ರಕ್ಷಿಸಲು ಅವುಗಳಿಗೆ ರಾಸಾಯನಿಕ ಸಿಂಪಡಣೆ ಕಾರ್ಯವನ್ನು ಆರಂಭಿಸಿದೆ.

 ಮರುಭೂಮಿ ಮಿಡತೆಗಳ ಹಿಂಡು ಅಮರಾವತಿ ಜಿಲ್ಲೆಯ ಮೂಲಕ ರಾಜ್ಯವನ್ನು ಪ್ರವೇಶಿಸಿತ್ತು. ವಾರ್ಧಾಕ್ಕೆ ದಾಳಿಯಿಟ್ಟಿದ್ದ ಅವು ಈಗ ನಾಗ್ಪುರದ ಕಟೋಳ ತಾಲೂಕಿನಲ್ಲಿ ಹಾವಳಿಯನ್ನೆಬ್ಬಿಸಿವೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಭೋಸಲೆ ಅವರು,ಈ ಮಿಡತೆಗಳು ರಾತ್ರಿ ವೇಳೆ ಪ್ರಯಾಣ ಮಾಡುವುದಿಲ್ಲ. ಹಗಲಿನಲ್ಲಿ ಪ್ರಯಾಣಿಸುವ ಇವು ಗಾಳಿಯ ದಿಕ್ಕಿನಲ್ಲಿ ಹಾರುತ್ತವೆ. ಇವು ಎಲ್ಲ ವಿಧಗಳ ಸಸ್ಯಗಳಿಗೆ ಅಪಾಯಕಾರಿಯಾಗಿವೆ. ಹಸಿರು ಎಲೆಗಳನ್ನು ತಿನ್ನುವ ಅವು ಬೆಳೆದು ನಿಂತ ಪೈರುಗಳನ್ನು ನಾಶಗೊಳಿಸುತ್ತವೆ ಎಂದರು.

ಅತ್ತ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಮಿಡತೆಗಳ ಸಂಭಾವ್ಯ ದಾಳಿಯನ್ನು ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತವು ಕಾರ್ಯಪಡೆಯನ್ನು ರಚಿಸಿದೆ. 200 ಲೀ.ಗಳಷ್ಟು ಕ್ಲೋರೊಪೈರಿಫಾಸ್ ಅನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದ್ದು, ಜಿಲ್ಲೆಯ ಹೊರಗೆ ಈ ರಾಸಾಯನಿಕವನ್ನು ಪೂರೈಸದಂತೆ ಅದರ ಮಾರಾಟಗಾರರಿಗೆ ಸೂಚಿಸಲಾಗಿದೆ. ಸ್ಪ್ರೇಯರ್‌ಗಳನ್ನು ಅಳವಡಿಸಲಾಗಿರುವ ಡಝನ್‌ಗೂ ಅಧಿಕ ಟ್ರಾಕ್ಟರ್‌ಗಳನ್ನು ಸಜ್ಜಾಗಿರಿಸಿದ್ದು,ಕಟ್ಟೆಚ್ಚರದಿಂದ ಇರುವಂತೆ ಅಗ್ನಿಶಾಮಕ ದಳಕ್ಕೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪಾಕಿಸ್ಥಾನವನ್ನು ದಾಟಿದ ಬಳಿಕ ಈ ಮಿಡತೆಗಳ ದಂಡು ಎ.11ರಂದು ರಾಜಸ್ಥಾನದ ಮೂಲಕ ಭಾರತವನ್ನು ಪ್ರವೇಶಿಸಿತ್ತು. ಸೋಮವಾರ ಮಿಡತೆಗಳು ಜೈಪುರ ನಗರದ ಕೆಲವು ವಸತಿ ಪ್ರದೇಶಗಳಿಗೂ ನುಗ್ಗಿದ್ದವು.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಿಡತೆಗಳ ಸಂಭಾವ್ಯ ದಾಳಿಯ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.

ಮಿಡತೆಗಳ ಹಿಂಡುಗಳು ಈ ವರ್ಷ ಭಾರತದ ಕೃಷಿ ಇಳುವರಿಗೆ ಹೊಡೆತ ನೀಡುವ ಬೆದರಿಕೆಯನ್ನೊಡ್ಡಿವೆ ಎಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News