ಭಾರತೀಯ ಶಾಂತಿಪಾಲಕಿಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

Update: 2020-05-26 16:21 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಮೇ 26: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮಹಿಳಾ ಸೇನಾಧಿಕಾರಿ ಮತ್ತು ಬ್ರೆಝಿಲ್‌ನ ಓರ್ವ ಮಹಿಳಾ ಸೇನಾಧಿಕಾರಿಯನ್ನು ಪ್ರತಿಷ್ಠಿತ ಯುನೈಟೆಡ್ ನೇಶನ್ಸ್ ಮಿಲಿಟರಿ ಜಂಡರ್ ಆ್ಯಡ್ವಕೇಟ್ ಆಫ್ ದ ಈಯರ್ ಪ್ರಶಸ್ತಿ (2019)ಗಾಗಿ ಆಯ್ಕೆ ಮಾಡಲಾಗಿದೆ.

ಅವರು ಪ್ರಭಾವಿ ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬಣ್ಣಿಸಿದ್ದಾರೆ.

ಭಾರತೀಯ ಸೇನಾಧಿಕಾರಿ ಮೇಜರ್ ಸುಮನ್ ಗವಾನಿ ಮತ್ತು ಬ್ರೆಝಿಲ್ ನೌಕಾಪಡೆ ಅಧಿಕಾರಿ ಕಮಾಂಡರ್ ಕಾರ್ಲಾ ಮೋಂಟೇರೊ ಡಿ ಕ್ಯಾಸ್ಟ್ರೊ ಅರಾವುಜೊ ಮೇ 29ರಂದು ನಡೆಯಲಿರುವ ಆನ್‌ಲೈನ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ವಹಿಸಲಿದ್ದಾರೆ. ಮೇ 29 ಅಂತರ್‌ರಾಷ್ಟ್ರೀಯ ವಿಶ್ವಸಂಸ್ಥೆಯ ಶಾಂತಿಪಾಲಕರ ದಿನವಾಗಿದೆ.

ಸೇನಾ ವೀಕ್ಷಕಿಯಾಗಿ ಸುಮನ್ ಗವಾನಿ ಇತ್ತೀಚೆಗೆ ದಕ್ಷಿಣ ಸುಡಾನ್‌ನಲ್ಲಿನ ತನ್ನ ಕರ್ತವ್ಯವನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೂ ಮೊದಲು ಅವರು ದಕ್ಷಿಣ ಸುಡಾನ್‌ನಲ್ಲಿನ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು.

ಅರಾವುಜೊ ವಿಶ್ವಸಂಸ್ಥೆಯ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ವಿಶ್ವಸಂಸ್ಥೆಯ ಮಲ್ಟಿಡೈಮೆನ್ಶನಲ್ ಇಂಟಗ್ರೇಟಡ್ ಸ್ಟೆಬಿಲೈಸೇಶನ್ ಮಿಶನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News