ರಾಜ್ ನಾಥ್ ಸಿಂಗ್ ಅವರಿಂದ ಸಿಡಿಎಸ್, ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಭದ್ರತಾ ಪುನರ್‌ಪರಿಶೀಲನೆ ಸಭೆ

Update: 2020-05-26 16:58 GMT

ಹೊಸದಿಲ್ಲಿ,ಮೇ 26: ಲಡಾಖ್‌ನಲ್ಲಿ ಚೀನಾದೊಂದಿಗೆ ಗಡಿ ಬಿಕ್ಕಟ್ಟಿನ ನಡುವೆಯೇ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು ಮಂಗಳವಾರ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ.ಬಿಪಿನ್ ರಾವತ್ ಮತ್ತು ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಸುದೀರ್ಘ ಭದ್ರತಾ ಪುನರ್‌ಪರಿಶೀಲನೆ ಸಭೆಯನ್ನು ನಡೆಸಿದರು.

ಗಡಿಯಲ್ಲಿ ಚೀನಾದ ಇತ್ತೀಚಿನ ಪ್ರಚೋದನೆಗೆ ಪ್ರತಿಕ್ರಿಯಿಸಲು ತನ್ನ ಆಯ್ಕೆಗಳನ್ನು ಭಾರತವು ತೂಗಿ ನೋಡುತ್ತಿದ್ದು, ಇಂದಿನ ಸಭೆಯು ಕಳೆದ ಎರಡು ವಾರಗಳಲ್ಲಿ ನಡೆಸಲಾದ ಸರಣಿ ಸಮಾಲೋಚನೆಗಳಲ್ಲಿ ಇತ್ತೀಚಿನದ್ದಾಗಿದೆ.

 ಎರಡು ದಿನಗಳ ಹಿಂದೆ ಲೇಹ್‌ನಿಂದ ದಿಲ್ಲಿಗೆ ವಾಪಸಾಗಿದ್ದ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಾಣೆ ಅವರು ಉಭಯ ದೇಶಗಳ ನಡುವಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಸ್ಥಿತಿಯ ಬಗ್ಗೆ ಸಿಂಗ್ ಅವರಿಗೆ ಮಾಹಿತಿ ನೀಡಿದ್ದರು.

ಉಭಯ ದೇಶಗಳು ವಿವಾದಿತ ಗಡಿ ಪ್ರದೇಶಗಳಲ್ಲಿ ಆಕ್ರಮಣಕಾರಿ ನಿಲುವು ಕಾಯ್ದುಕೊಂಡಿರುವುದರಿಂದ ಮೇ 5ರಂದು ಮೊದಲ ಗಡಿ ಬಿಕ್ಕಟ್ಟಿನಿಂದೀಚಿಗೆ ಭಾರತ ಮತ್ತು ಚೀನಿ ಪಡೆಗಳ ನಡುವೆ ಆರು ಸುತ್ತುಗಳ ಮಾತುಕತೆಗಳು ನಡೆದಿದ್ದರೂ ಉದ್ವಿಗ್ನತೆಯನ್ನು ತಗ್ಗಿಸುವಲ್ಲಿ ಅವು ವಿಫಲಗೊಂಡಿವೆ.

ಭಾರತವು ಎಲ್‌ಎಸಿಯ ತನ್ನ ಪಾರ್ಶ್ವದ ಭೂಪ್ರದೇಶದಲ್ಲಿಯೂ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸಬೇಕೆಂಬ ಷರತ್ತನ್ನು ಚೀನಾ ಮುಂದಿಟ್ಟಿದ್ದು,ಇದು ಭಾರತಕ್ಕೆ ಪಥ್ಯವಾಗಿಲ್ಲ. ಗಡಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಅದು ಚೀನಾ ಸರಕಾರಕ್ಕೆ ಸೂಚಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತವು ಕಳೆದ ವರ್ಷ ಗಡಿಯ ತನ್ನ ಪಾರ್ಶ್ವದಲ್ಲಿ ನಿರ್ಮಿಸಿರುವ 255 ಕಿ.ಮೀ.ಉದ್ದದ ಡಾರ್ಬಕ್-ಶಿಯಾಕ್-ಡಿಬಿಒ ರಸ್ತೆಯು ಚೀನಿ ಸೇನೆಯು ವಿವಾದವೆತ್ತಲು ಮುಖ್ಯ ಕಾರಣವಾಗಿದೆ. ಡೆಸ್ಪಾಂಗ್ ಪ್ರದೇಶ ಮತ್ತು ಗಲ್ವಾನ್ ಕಣಿವೆಗೆ ಪ್ರವೇಶವನ್ನು ಒದಗಿಸುವ ಈ ರಸ್ತೆಯು ಕಾರಾಕೋರಂ ಪಾಸ್ ಬಳಿ ಅಂತ್ಯಗೊಳ್ಳುತ್ತದೆ. ಈ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಗಸ್ತು ಕಾರ್ಯ ಸುಲಭಗೊಂಡಿದೆ ಮತ್ತು ಗಸ್ತು ಆವರ್ತನಗಳನ್ನು ಹೆಚ್ಚಿಸಲು ಸಾಧ್ಯವಾಗಿದೆ.

ಬುಧವಾರದಿಂದ ದಿಲ್ಲಿಯಲ್ಲಿ ಸೇನಾ ಕಮಾಂಡರ್‌ಗಳ ಮೂರು ದಿನಗಳ ದ್ವೈವಾರ್ಷಿಕ ಸಮ್ಮೇಳನವು ಆರಂಭಗೊಳ್ಳಲಿದ್ದು,ಚೀನಾ ಗಡಿಯಲ್ಲಿನ ಬಿಕ್ಕಟ್ಟು ಮುಖ್ಯವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News