ಮಾಸ್ಕ್ ಧರಿಸುವ ವಿಚಾರದಲ್ಲಿ ತಗಾದೆ: ಪುತ್ತೂರಿನ ಸೂಪರ್ ಮಾರ್ಕೆಟ್‌ನಲ್ಲಿ ಗ್ರಾಹಕ-ಸಿಬ್ಬಂದಿ ನಡುವೆ ಚಕಮಕಿ, ಹಲ್ಲೆ

Update: 2020-05-27 06:01 GMT

ಪುತ್ತೂರು, ಮೇ 27: ಮಾಸ್ಕ್ ಧರಿಸದೆ ಬಂದ ಗ್ರಾಹಕರೊಬ್ಬರನ್ನು ಪ್ರಶ್ನಿಸಿದ ವಿಚಾರದಲ್ಲಿ ನಗರದ ದರ್ಬೆಯಲ್ಲಿರುವ ಖಾಸಗಿ ಸೂಪರ್ ಮಾರ್ಕೆಟ್ ಸಿಬ್ಬಂದಿ ಮತ್ತು ಗ್ರಾಹಕನ ನಡುವೆ ಮಾತಿನ ಚಕಮಕಿ, ಹಲ್ಲೆ ನಡೆದಿದೆ ಎನ್ನಲಾದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಈ ಘಟನೆ ಮಂಗಳವಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಯುವಕನೋರ್ವ ಮಾಸ್ಕ್ ಧರಿಸದೆ ಮಳಿಗೆಯನ್ನು ಪ್ರವೇಶಿಸಿದ್ದ ಎನ್ನಲಾಗಿದ್ದು, ಈ ಸಂದರ್ಭ ಸಂಸ್ಥೆಯ ಸಿಬ್ಬಂದಿ ಆಕ್ಷೇಪಿಸಿದಾಗ ಯುವಕ ಮತ್ತು ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಮಿಲಾಯಿಸುವ ಹಂತ ತಲುಪಿದೆ. ಇದೇ ಸಂದರ್ದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಠಾಣೆಗೆ ಕರೆದೊಯ್ದಿದ್ದರು. ಬಳಿಕ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಸಮಕ್ಷಮದಲ್ಲಿ ಸಂಸ್ಥೆ ಮತ್ತು ಯುವಕನ ಕಡೆಯವರ ನಡುವೆ ಮಾತುಕತೆ ನಡೆದು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಲಾಗಿತ್ತು. ಆದರೆ ಇದೀಗ ಈ ಘಟನೆಯ ವೀಡಿಯೊ ವೈರಲ್ ಆಗಿರುವ ಹಿನ್ನಲೆಯಲ್ಲಿ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ತನ್ನ ಚಿಕ್ಕಮ್ಮನೊಂದಿಗೆ ಸೂಪರ್ ಮಾರ್ಕೆಟ್‌ಗೆ ಆಗಮಿಸಿದ್ದ ಯುವಕ ಮಾಸ್ಕ್ ಧರಿಸದೇ ಮಳಿಗೆಯೊಳಗೆ ಪ್ರವೇಶಿಸಿದ್ದನೆನ್ನಲಾಗಿದೆ. ಆ ಸಂದರ್ಭ ಆತನನ್ನು ಸಿಬ್ಬಂದಿ ತಡೆಯದೆ ಒಳಗೆ ಬಿಟ್ಟಿದ್ದರು. ಖರೀದಿ ಬಳಿಕ ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಲೆಂದು ಮೊಬೈಲ್ ಫೋನ್ ಗಾಗಿ ಯುವಕ ಮಳಿಗೆಯ ಹೊರಗೆ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನದ ಬಳಿಗೆ ಹೋಗಿ ಹಿಂದಿರುಗಿದಾಗ ಸಿಬ್ಬಂದಿ ತಡೆದಿದ್ದರೆನ್ನಲಾಗಿದೆ. ಈ ವಿಚಾರವಾಗಿ ಸಿಬ್ಬಂದಿ ಮತ್ತು ಯುವಕ ನಡುವೆ ಮಾತಿನ ಚಕಮಕಿ ನಡೆದು ಅದು ತಾರಕಕ್ಕೇರಿ ಪರಸ್ಪರ ಹಲ್ಲೆಗೆ ಕಾರಣವಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News