ಹಣವಿದ್ದರೆ ತರಕಾರಿ ಖರೀದಿಸಿ,ಇಲ್ಲದಿದ್ದರೆ ಉಚಿತ:ಗಮನ ಸೆಳೆದ ಮಹಾರಾಷ್ಟ್ರದ ತರಕಾರಿ ಮಾರಾಟಗಾರ

Update: 2020-05-27 08:12 GMT

ಔರಂಗಾಬಾದ್, ಮೇ 27: ಎಲ್ಲೆಡೆ ಲಾಕ್‌ಡೌನ್ ಜಾರಿಯಲ್ಲಿರುವಾಗ ತರಕಾರಿ ಗಾಡಿಯಲ್ಲಿ "ಸಾಧ್ಯವಾದರೆ ಖರೀದಿಸಿ, ಇಲ್ಲದಿದ್ದರೆ ಉಚಿತವಾಗಿ ಮನೆಗೆ ತೆಗೆದುಕೊಂಡು ಹೋಗಿ'' ಎಂಬ ಫಲಕ ಔರಂಗಾಬಾದ್ ನಗರದ ಜನತೆಯ ಗಮನಸೆಳೆದಿತ್ತು. ಕೆಲವರು ಇದನ್ನು ಕುತೂಹಲಕಾರಿ ನೋಡಿದರೆ, ಇನ್ನು ಕೆಲವರು ಇದನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು.

ತರಕಾರಿ ಮಾರಾಟಗಾರ ಪದವೀಧರನಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊರೋನ ವೈರಸ್‌ನಿಂದಾಗಿ ಹೇರಲಾಗಿರುವ ಲಾಕ್‌ಡೌನ್‌ನಿಂದ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಡವರಿಗೆ ಉಚಿತವಾಗಿ ತರಕಾರಿಯನ್ನು ವಿತರಿಸಲು ಈ ಯುವಕ ನಿರ್ಧರಿಸಿದ.

ತಾನು ಕೆಲಸ ಮಾಡುತ್ತಿದ್ದ ಕಂಪೆನಿಯು ಲಾಕ್‌ಡೌನ್ ಬಳಿಕ ಸಂಬಳ ನೀಡಲು ನಿಲ್ಲಿಸಿದ ಬಳಿಕ ರಾಹುಲ್ ಲಾಬ್ಡೆ ಜೀವನ ಸಾಗಿಸಲು ತನ್ನ ತಂದೆಯ ಜೊತೆಗೆ ಕೈಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ನಿರ್ಧರಿಸಿದರು.ಆರಂಭದಲ್ಲಿ ಇತರ ತರಕಾರಿ ಮಾರಾಟಗಾರರಂತೆಯೇ ಮಾರುಕಟ್ಟೆ ಬೆಲೆಯಲ್ಲಿ ತರಕಾರಿ ಮಾರಾಟ ಮಾಡಲು ಆರಂಭಿಸಿದ್ದರು. ನಾಲ್ಕು ದಿನಗಳ ಹಿಂದೆ ವೃದ್ಧ ಮಹಿಳೆಯೊಬ್ಬರು ಕೇವಲ ಐದು ರೂ. ಹಿಡಿದುಕೊಂಡು ತರಕಾರಿ ಖರೀದಿಸಲು ಬಂದಿದ್ದರು.ಇದನ್ನು ನೋಡಿದ ಬಳಿಕ ಯುವಕ ಬಡವರಿಗೆ ಉಚಿತವಾಗಿ ತರಕಾರಿ ವಿತರಿಸಲು ನಿರ್ಧರಿಸಿದ್ದರು.

ವೃದ್ಧೆಯೊಬ್ಬರು ನನ್ನ ಬಳಿ ಬಂದು 5 ರೂ.ಗೆ ತರಕಾರಿ ನೀಡುವಂತೆ ಕೇಳಿದರು. ಅವರ ಬಳಿ ಹೆಚ್ಚು ಹಣವಿರಲಿಲ್ಲ. 5 ರೂ.ಗೆ ಅವರಿಗೆ ಏನು ಕೊಡಲಿ ಎಂದು ಯೋಚಿಸಿದೆ. ಅವರು ಬಯಸಿದ ತರಕಾರಿಯನ್ನು ಉಚಿತವಾಗಿ ವಿತರಿಸಲು ಮುಂದಾದೆ. ಹಣ ನೀಡಲು ಸಾಧ್ಯವಿಲ್ಲದವರಿಗೆ ಉಚಿತವಾಗಿ ತರಕಾರಿ ಮಾರಾಟ ಮಾಡಲು ನಿರ್ಧರಿಸಿದೆ.ರಾಹುಲ್ ನಗರದ ಅಂಬೇಡ್ಕರ್ ಚೌಕದಲ್ಲಿ ತರಕಾರಿ ಮಾರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News