'ರಿಪಬ್ಲಿಕ್ ಟಿವಿ' ವಿರುದ್ಧದ ‘ಆತ್ಮಹತ್ಯೆಗೆ ಪ್ರಚೋದನೆ’ ಪ್ರಕರಣದ ಮರುತನಿಖೆಗೆ ಆದೇಶಿಸಿದ ಮಹಾರಾಷ್ಟ್ರ ಸರಕಾರ

Update: 2020-05-27 09:34 GMT

ಹೊಸದಿಲ್ಲಿ: ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿ ವಿರುದ್ಧ ಎರಡು ವರ್ಷಗಳ ಹಿಂದೆ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದ ಮರುತನಿಖೆಗೆ ಮಹಾರಾಷ್ಟ್ರ ಸರಕಾರ ಆದೇಶಿಸಿದೆ.

ಎರಡು ವರ್ಷಗಳ ಹಿಂದೆ, ಮೇ 2018ರಲ್ಲಿ ಆರ್ಕಿಟೆಕ್ಟ್ ಅನ್ವಯ್ ನಾಯ್ಕ್ ಎಂಬವರು ತಮ್ಮ ತಾಯಿಯ ಜತೆ ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರಿ ಅದ್ನ್ಯ ನಾಯ್ಕ್ ದಾಖಲಿಸಿರುವ ಹೊಸ ದೂರಿನನ್ವಯ ಮರು ತನಿಖೆಗೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಅರ್ನಬ್ ಅವರ ವಾಹಿನಿಯಿಂದ ಬರಬೇಕಾಗಿದ್ದ ಬಾಕಿ ಹಣ ಸಂದಾಯ ಮಾಡದೇ ಇದ್ದುದರಿಂದ ತನ್ನ ತಂದೆ ಹಾಗೂ ಅಜ್ಜಿ ಆತ್ಮಹತ್ಯೆಗೈದ ಪ್ರಕರಣವನ್ನು ಆಲಿಬಾಗ್ ಪೊಲೀಸರು ತನಿಖೆ ನಡೆಸಿರಲಿಲ್ಲ ಎಂದು ಅದ್ನ್ಯ ತನ್ನ ದೂರಿನಲ್ಲಿ ಆರೋಪಿಸಿದ್ದಾರೆಂದು ದೇಶಮುಖ್ ಹೇಳಿದ್ದಾರೆ. ಸಿಐಡಿ ಈ ಪ್ರಕರಣದ ಮರು ತನಿಖೆ ನಡೆಸುವುದು ಎಂದು ಸಚಿವರು ಹೇಳಿದ್ದಾರೆ.

53 ವರ್ಷದ ಅನ್ವಯ್ ಮತ್ತವರ ತಾಯಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಗೋಸ್ವಾಮಿ ಮತ್ತಿತರರ ವಿರುದ್ಧ ಮೇ 2018ರಲ್ಲಿ ಆಲಿಬಾಗ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಗೋಸ್ವಾಮಿ ಮತ್ತು ಐಕಾಸ್ಟ್ ಎಕ್ಸ್/ಸ್ಕೈ ಮೀಡಿಯಾದ ಫಿರೋಝ್ ಶೇಖ್ ಹಾಗೂ ಸ್ಮಾರ್ಟ್ ವರ್ಕ್‍ನ ನಿತೀಶ್ ಸರ್ದ ಅವರು ತಮಗೆ ರೂ 5.4 ಕೋಟಿ ಪಾವತಿಸಲು ಬಾಕಿಯಿದೆ ಎಂದು ಅನ್ವಯ್ ತಮ್ಮ ಸುಸೈಡ್ ನೋಟ್‍ನಲ್ಲಿ ಬರೆದಿದ್ದರು.

ಕೊನ್ಕೋರ್ಡ್ ಡಿಸೈನ್ಸ್ ಪ್ರೈ. ಲಿ. ಎಂಬ ಸಂಸ್ಥೆ ಹೊಂದಿದ್ದ ಅನ್ವಯ್ ಅವರಿಗೆ ರಿಪಬ್ಲಿಕ್ ಟಿವಿಯ ಮಾತೃ ಸಂಸ್ಥೆ ಎಆರ್‍ಜಿ ಔಟ್ಲಿಯರ್ ಮೀಡಿಯಾ 83 ಲಕ್ಷ ರೂ. ಬಾಕಿಯಿರಿಸಿತ್ತು ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖವಾಗಿತ್ತು.

ಅನ್ವಯ್ ತಮ್ಮ ಸುಸೈಡ್ ನೋಟ್‍ ನಲ್ಲಿ ಮಾಡಿದ್ದ ಆರೋಪವನ್ನು ಅವರ ಪತ್ನಿ ಅಕ್ಷತಾ ನಾಯ್ಕ್ ಪುನರುಚ್ಛರಿಸುತ್ತಿರುವ ವೀಡಿಯೋವೊಂದನ್ನು ಮಹಾರಾಷ್ಟ್ರ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News