ಕರಿಯ ವ್ಯಕ್ತಿಯ ಕುತ್ತಿಗೆಗೆ ಮೊಣಕಾಲಿಟ್ಟು ಕೊಂದ ಪೊಲೀಸ್ ಅಧಿಕಾರಿ

Update: 2020-05-27 16:28 GMT

ವಾಶಿಂಗ್ಟನ್, ಮೇ 27: ಕೈಕೋಳ ಹಾಕಲ್ಪಟ್ಟ ಕರಿಯ ವ್ಯಕ್ತಿಯೋರ್ವನ ಕುತ್ತಿಗೆಯ ಮೇಲೆ ಮೊಣಕಾಲೂರಿ ಪೊಲೀಸ್ ಅಧಿಕಾರಿಯೊಬ್ಬ ಕುಳಿತು ಆ ವ್ಯಕ್ತಿಯ ಸಾವಿಗೆ ಕಾರಣವಾದ ಘಟನೆ ಅಮೆರಿಕದ ಮಿನಪೊಲಿಸ್ ನಗರದಲ್ಲಿ ಸೋಮವಾರ ನಡೆದಿದೆ. ಈ ಘಟನೆಯ ಬೆನ್ನಿಗೇ ಆಫ್ರಿಕನ್ ಅಮೆರಿಕನ್ನರನ್ನು ಅಮೆರಿಕದ ಪೊಲೀಸರು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ದೇಶದಲ್ಲಿ ಹೊಸದಾಗಿ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸ್ ಕಸ್ಟಡಿಯಲ್ಲಿ ಜಾರ್ಜ್ ಫ್ಲಾಯ್ಡಾ ಸತ್ತ ಬಳಿಕ, ಮಿನಪೊಲಿಸ್ ಮೇಯರ್ ಜಾಕೋಬ್ ಫ್ರೇ ನಾಲ್ವರು ಪೊಲೀಸರನ್ನು ವಜಾಗೊಳಿಸಿದ್ದಾರೆ.

ಮಿನಪೊಲಿಸ್ ನಗರದ ರಸ್ತೆಯೊಂದರಲ್ಲಿ ಪೊಲೀಸರು ಶಂಕಿತನ ಅಂಗಿಯನ್ನು ತೆಗೆದು ಕೈಕೋಳ ಹಾಕಿ ಕೆಳಗೆ ಕೆಡವುತ್ತಾರೆ ಹಾಗೂ ಓರ್ವ ಪೊಲೀಸ್ ಅಧಿಕಾರಿ ತನ್ನ ಮೊಣಕಾಲನ್ನು ಆತನ ಕುತ್ತಿಗೆಯ ಮೇಲೆ ಊರುತ್ತಾನೆ.

“ನಿಮ್ಮ ಮೊಣಕಾಲು ನನ್ನ ಕುತ್ತಿಗೆಯ ಮೇಲಿದೆ. ನನಗೆ ಉಸಿರಾಡಲು ಆಗುತ್ತಿಲ್ಲ” ಎಂದು ಫ್ಲಾಯ್ಡಾ ಹೇಳುವುದು ವೀಡಿಯೊದಲ್ಲಿ ಕೇಳಿಸುತ್ತದೆ. ಆದರೆ, ಪೊಲೀಸರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ.

ಬಳಿಕ ಫ್ಲಾಯ್ಡಾ ಮೌನವಾಗುತ್ತಾರೆ ಹಾಗೂ ಅವರ ದೇಹ ನಿಧಾನವಾಗಿ ಚಲನೆಯನ್ನು ಕಳೆದುಕೊಳ್ಳುತ್ತದೆ. ಆಗ ಪೊಲೀಸರು ಶಂಕಿತನಿಗೆ ಹೇಳುತ್ತಾರೆ: ಎದ್ದು ಕಾರಿನೊಳಗೆ ಹೋಗು. ಯಾವುದೇ ಸ್ಪಂದನೆಯಿಲ್ಲದಾಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ಅಲ್ಲಿ ಆತನ ಸಾವನ್ನು ವೈದ್ಯರು ಘೋಷಿಸುತ್ತಾರೆ.

ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಬೇಕು ಎಂಬ ಬೇಡಿಕೆ ಕ್ಷಣಕ್ಷಣಕ್ಕೆ ಬೆಳೆಯುತ್ತಿದೆ.

ಕರಿಯನಾಗಿರುವುದಕ್ಕೆ ಅಮೆರಿಕದಲ್ಲಿ ಮರಣ ದಂಡನೆ ವಿಧಿಸಬಾರದು

ಘಟನೆಯ ಬಗ್ಗೆ ಮಿನಪೊಲಿಸ್ ಮೇಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಏನು ನೋಡಿದ್ದೇನೋ ಅದು ಎಲ್ಲ ವಿಧದಲ್ಲೂ ತಪ್ಪಾಗಿದೆ” ಎಂದು ಮೇಯರ್ ಜಾಕೋಬ್ ಫ್ರೇ ಹೇಳಿದ್ದಾರೆ.

ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಕರಿಯ ವ್ಯಕ್ತಿಯೋರ್ವನ ಕುತ್ತಿಗೆಯ ಮೇಲೆ ಮೊಣಕಾಲಿನಿಂದ ಒತ್ತುವುದನ್ನು ಐದು ನಿಮಿಷ ನಾವು ನೋಡಿದ್ದೇವೆ ಎಂದು ಅವರು ಹೇಳಿದರು.

ಕರಿಯನಾಗಿರುವುದಕ್ಕೆ ಅಮೆರಿಕದಲ್ಲಿ ಮರಣ ದಂಡನೆ ವಿಧಿಸಬಾರದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News