ಕೇಂದ್ರ ಸಚಿವರ ಭೇಟಿಗೆ ಮುಗಿಬಿದ್ದ ನೂರಾರು ಮಂದಿ: ಸುರಕ್ಷಿತ ಅಂತರದ ಸಂಪೂರ್ಣ ಉಲ್ಲಂಘನೆ

Update: 2020-05-27 17:32 GMT

ಮೊರೆನಾ(ಮ.ಪ್ರ),ಮೇ 27: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತನ್ನ ಲೋಕಸಭಾ ಕ್ಷೇತ್ರವಾದ ಮೊರೆನಾದ ಶ್ಯೋಪುರಕ್ಕೆ ಭೇಟಿ ನೀಡಿದ ಸಂದರ್ಭ 400ಕ್ಕೂ ಅಧಿಕ ಜನರು ಅವರನ್ನು ಮುತ್ತಿಕೊಂಡಿದ್ದು,ಈ ಸಂದರ್ಭ ಸುರಕ್ಷಿತ ಅಂತರ ನಿಯಮ ಹೇಳಹೆಸರಿಲ್ಲದಂತಾಗಿತ್ತು.

ಸಚಿವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19 ಸ್ಥಿತಿ ಕುರಿತು ಪುನರ್‌ಪರಿಶೀಲನಾ ಸಭೆ ನಡೆಸಿದ್ದು,400ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮತ್ತು ಇತರರು ಅವರನ್ನು ಸ್ವಾಗತಿಸಲು ಹಾಗೂ ಅರ್ಜಿಗಳನ್ನು ಮತ್ತು ದೂರುಗಳನ್ನು ಸಲ್ಲಿಸಲು ಸೇರಿದ್ದರು.

ಮುಖಕ್ಕೆ ಮಾಸ್ಕ್ ಧರಿಸಿದ್ದ ತೋಮರ್ ಗುಂಪಿನತ್ತ ಬರುತ್ತಿದ್ದಂತೆ ತಳ್ಳಾಟ ಆರಂಭವಾಗಿತ್ತು. ಗುಂಪನ್ನು ನಿಯಂತ್ರಿಸುವ ಪೊಲೀಸರ ಪ್ರಯತ್ನ ವಿಫಲವಾಗಿತ್ತು. ತೋಮರ್ ತನ್ನ ಕಾರಿನತ್ತ ತೆರಳುತ್ತಿದ್ದಾಗ ಕೈಗಳಲ್ಲಿ ಅರ್ಜಿಗಳನ್ನು ಹಿಡಿದುಕೊಂಡಿದ್ದ ಜನರು ನೂಕುನುಗ್ಗಲು ನಡೆಸಿದ್ದು,ಸುರಕ್ಷಿತ ಅಂತರ ನಿಯಮ ರಾಜಾರೋಷ ಉಲ್ಲಂಘನೆಯಾಗಿತ್ತು.

ಸುರಕ್ಷಿತ ಅಂತರ ಇರಲಿಲ್ಲ ಎನ್ನುವುದನ್ನು ಒಪ್ಪಿಕೊಂಡ ಜಿಲ್ಲಾ ಬಿಜೆಪಿ ಅಧ್ಯಕ್ಷರು,ಇದಕ್ಕೆಲ್ಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕಾರಣ ಎಂದು ದೂರಿದ್ದಾರೆ. ಆದರೆ ಕಾಂಗ್ರೆಸ್ ಈ ಆರೋಪವನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News