ಅಮೆರಿಕದಲ್ಲಿ ಒಂದು ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-05-28 03:53 GMT

ವಾಷಿಂಗ್ಟನ್ : ಕೇವಲ ನಾಲ್ಕು ತಿಂಗಳ ಹಿಂದೆ ಯಾರೂ ಕನಸಿನಲ್ಲೂ ಎಣಿಸದ ರೀತಿಯಲ್ಲಿ ಅಮೆರಿಕದಲ್ಲಿ ಕೊರೋನ ಸಾಂಕ್ರಾಮಿಕದಿಂದ ಮೃತಪಟ್ಟವರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಈ ಮೂಲಕ ಲ್ಯಾಟಿನ್ ಅಮೆರಿಕದಲ್ಲಿ ಈ ಮಾರಕ ಸೋಂಕು ತನ್ನ ಬಿಗಿ ಹಿಡಿತ ಮುಂದುವರಿಸಿದೆ.

ಯೂರೋಪಿಯನ್ ಒಕ್ಕೂಟ ಈ ಬಿಕ್ಕಟ್ಟಿನಿಂದ ಹೊರಬಂದು ದೊಡ್ಡ ಪ್ರಮಾಣದ ಪುನಶ್ಚೇತನಕ್ಕೆ ಸಜ್ಜಾಗಿದ್ದರೆ, ಅಮೆರಿಕದಲ್ಲಿ ಮಾತ್ರ ಸೋಂಕು ತನ್ನ ಹಿಡಿತ ಸಡಿಲಿಸಿಲ್ಲ. ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,00,047ಕ್ಕೇರಿದ್ದು, ಒಟ್ಟು ಸೋಂಕಿತರ ಸಮಖ್ಯೆ 16.9 ಲಕ್ಷಕ್ಕೇರಿದೆ ಎಂದು ಜಾನ್ ಹಾಕಿನ್ಸ್ ವಿಶ್ವವಿದ್ಯಾನಿಲಯ ಕಲೆ ಹಾಕಿದ ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕೂಡಾ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ದೇಶದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ ಸಂದರ್ಭದಲ್ಲಿ ನಾವಿಲ್ಲಿ ಸೇರಿದ್ದೇವೆ ಎಂದು ಉದ್ಗರಿಸಿದರು. ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋಯಿ ಬಿಡನ್, ಈ ಹಂತದಲ್ಲಿ ಸಂತ್ರಸ್ತ ಕುಟುಂಬಗಳ ಜತೆ ನೇರವಾಗಿ ಸಂವಾದ ನಡೆಸಿದರು.

ಬಹಳಷ್ಟು ದೇಶಗಳು ಸಹಜತೆಯತ್ತ ಮರಳುತ್ತಿದ್ದರೂ, ಬ್ರೆಝಿಲ್ ಸೇರಿದಂತೆ ಲ್ಯಾಟಿನ್ ಅಮೆರಿಕದ ಹಲವು ದೇಶಗಳಲ್ಲಿ ಸೋಂಕು ವ್ಯಾಪಿಸು ತ್ತಲೇ ಇದೆ. ಯೂರೋಪ್ ಹಾಗೂ ಅಮೆರಿಕದ ಸಂಖ್ಯೆಯನ್ನು ಮೀರುವ ಮಟ್ಟದಲ್ಲಿ ಸೋಂಕು ಹರಡುತ್ತಿದೆ.

ಬ್ರೆಝಿಲ್‌ನಲ್ಲಿ ಕಳೆದ ವಾರ ದಾಖಲಾದ ಸಂಖ್ಯೆಯಿಂದ ನಿಜಕ್ಕೂ ಕಳವಳವಾಗುತ್ತಿದೆ ಎಂದು ಪಾನ್ ಅಮೆರಿಕನ್ ಹೆಲ್ತ್ ಆರ್ಗನೈಸೇಷನ್ ನಿರ್ದೇಶಕರಾದ ಕರಿಸ್ಸಾ ಎಟಿನ್ ಹೇಳಿದ್ದಾರೆ. ಪೆರು ಹಾಗೂ ಚಿಲಿಯಲ್ಲೂ ದೊಡ್ಡ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. ಬ್ರೆಝಿಲ್‌ನಲ್ಲಿ ಸತತ ಐದನೇ ದಿನ ವಿಶ್ವದ ಗರಿಷ್ಠ ಸಂಖ್ಯೆಯ ಸಾವು ಸಂಭವಿಸಿದ್ದು, ಮೃತರ ಸಂಖ್ಯೆ 24,512ಕ್ಕೇರಿದೆ. ದೇಶದಲ್ಲಿ ಒಟ್ಟು 3.90 ಲಕ್ಷ ಮಂದಿಗೆ ಸೋಂಕು ತಗುಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News