ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪ ಎದುರಿಸಲು ಕ್ರಮ: ಎನ್‌ಡಿಆರ್‌ಎಫ್ ಬೆಟಾಲಿಯನ್ ನಿಯೋಜನೆ

Update: 2020-05-29 06:05 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಮೇ 28: ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ ಎದುರಿಸಲು ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪರಿಹಾರ ತಂಡ) ಬೆಟಾಲಿಯನ್ ನಿಯೋಜಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಒಂದೆರಡು ದಿನದೊಳಗೆ ರಾಜ್ಯಕ್ಕೆ ತಂಡಗಳು ಆಗಮಿಸಲಿವೆ.

ಕಳೆದೆರಡು ವರ್ಷಗಳಲ್ಲಿ ನಡೆದ ದುರಂತಗಳನ್ನು ಆಧರಿಸಿ ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಧಾರವಾಡ ಜಿಲ್ಲೆಯನ್ನು 4 ಕೇಂದ್ರವಾಗಿಸಿ ಎನ್‌ಡಿಆರ್‌ಎಫ್ ಬೆಟಾಲಿಯನ್ ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಟಾಲಿಯನ್ ಉಡುಪಿ ಮತ್ತು ಉತ್ತರ ಕನ್ನಡದ ಮೇಲೂ ನಿಗಾ ಇರಿಸಲಿದೆ. ಕೊಡಗಿನ ಬೆಟಾಲಿಯನ್ ಮೈಸೂರು, ಹಾಸನ ಮತ್ತು ಮಲೆನಾಡಿನ ಇತರ ಜಿಲ್ಲೆಗಳು, ಬೆಳಗಾವಿಯ ಬೆಟಾಲಿಯನ್ ಬಾಗಲಕೋಟೆ, ವಿಜಯಪುರ ಮತ್ತು ಪಕ್ಕದ ಜಿಲ್ಲೆಗಳು, ಧಾರವಾಡ ಬೆಟಾಲಿಯನ್ ಗದಗ, ಹಾವೇರಿ ಮತ್ತು ಪಕ್ಕದ ಜಿಲ್ಲೆಗಳ ಮೇಲೆ ನಿಗಾ ಇಡಲಿವೆ.

ಮಳೆಗಾಲಕ್ಕೆ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಆಗಮನದ ಬಗ್ಗೆ ಮಾಹಿತಿ ಬಂದಿದೆ. ಭಾರೀ ಮಳೆಯ ಸಂದರ್ಭದಲ್ಲಿ ಈ ತಂಡ ವಿಶೇಷ ಕಾರ್ಯ ನಡೆಸಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್ ದಕ್ಷಿಣ ವಲಯದ ಕಚೇರಿ ಆಂಧ್ರ ಪ್ರದೇಶದ ಗುಂಟೂರಿನಲ್ಲಿರುವುದರಿಂದ ತುರ್ತು ಸಂದರ್ಭಗಳಲ್ಲಿ ಅತಿವೃಷ್ಟಿ ಪ್ರದೇಶಗಳಿಗೆ ತಲುಪಲು ವಿಳಂಬವಾಗುವ ಕಾರಣ ಈ ವರ್ಷವೂ ಮುಂಚಿತವಾಗಿಯೇ ಎನ್‌ಡಿಆರ್‌ಎಫ್ ತರಿಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ಎನ್‌ಡಿಆರ್‌ಎಫ್ ತಂಡ ಸಿದ್ಧಗೊಂಡಿದ್ದು, ಕೆಲವೇ ದಿನದೊಳಗೆ ನಿಯೋಜನೆಗೊಂಡ ಜಿಲ್ಲೆಗಳಿಗೆ ಆಗಮಿಸಲಿವೆ.

ರಾಜ್ಯ ಮುಖ್ಯ ಕಾರ್ಯದರ್ಶಿ ಆಂಧ್ರದ ಗುಂಟೂರು ಎನ್‌ಡಿಆರ್‌ಎಫ್ ಮುಖ್ಯಸ್ಥರಿಗೆ ಪತ್ರ ಬರೆದು ರಾಜ್ಯಕ್ಕೆ ಬೆಟಾಲಿಯನ್ ಕಳುಹಿಸಿಕೊಡುವಂತೆ ಆಗ್ರಹಿಸಿದ್ದು, ಈ ಹಿನ್ನೆಲೆಯಲ್ಲಿ 4 ತಂಡಗಳನ್ನು ಕಳುಹಿಸಿಕೊಡಲಾಗುತ್ತಿದೆ.

ಕರ್ನಾಟಕದಲ್ಲಿ ಕಳೆದೆರಡು ವರ್ಷಗಳಿಂದ ಮಹಾಮಳೆ, ಭೂ ಕುಸಿತ ದೊಡ್ಡ ಮಟ್ಟದಲ್ಲಿ ತೊಂದರೆ ಮಾಡಿದ್ದು, ಡ್ಯಾಂಗಳಲ್ಲಿ ನೆರೆ ಉಕ್ಕಿ ಹರಿದಿತ್ತು. ಐಎಂಡಿ(ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾರ್ಟ್‌ಮೆಂಟ್) ಈಗಾಗಲೇ ಈ ವರ್ಷದ ಮುಂಗಾರುವಿನ ಸ್ಥಿತಿಗತಿ ಬಗ್ಗೆ ಹೇಳಿದ್ದು, ಅದರಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ವರದಿ ನೀಡಿತ್ತು. ಸತತ ಮಳೆ ಹಾಗೂ ನೆರೆಯಿಂದ ಜನರಿಗೆ ತೊಂದರೆಯಾಗದಂತೆ ರಾಜ್ಯ ಸರಕಾರ ಎನ್‌ಡಿಆರ್‌ಎಫ್ ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News