ಉಡುಪಿ: ಅಮಾಸೆಬೈಲು ಠಾಣಾ ಬಳಿ ಕೆಎಸ್‌ಆರ್‌ಪಿ ಎಆರ್‌ಎಸ್ಸೈ ಆತ್ಮಹತ್ಯೆ

Update: 2020-05-29 07:57 GMT

ಉಡುಪಿ, ಮೇ 29: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ(ಕೆಎಸ್‌ಆರ್‌ಪಿ)ಯ ಎಆರ್‌ಎಸ್ಸೈ (ಆರ್ಮ್ಡ್ ರಿಸರ್ವ್ ಸಬ್ ಇನ್‌ಸ್ಪೆಕ್ಟರ್) ಠಾಣೆಯ ಸಮೀಪದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಕಲಬುರಗಿ ನೌರುಗುಂಜ್ ನಿವಾಸಿ ಮಲ್ಲಿಕಾರ್ಜುನ ಗುಬ್ಬಿ(56) ಆತ್ಮಹತ್ಯೆ ಮಾಡಿಕೊಂಡ ಎಆರ್‌ಎಸ್ಸೈ. ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ಕೆಎಸ್ ಆರ್‌ಪಿ ಘಟಕದಲ್ಲಿ ಎಆರ್‌ಎಸ್ಸೈಯಾಗಿದ್ದ ಇವರು, 15 ದಿನಗಳ ಪಾಳಿಯಲ್ಲಿ ಕಳೆದ 9-10 ವರ್ಷಗಳಿಂದ ಅಮಾಸೆಬೈಲು ನಕ್ಸಲ್ ನಿಗ್ರಹ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಹೀಗೆ ಈ ಬಾರಿ ಮೇ 16ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಇವರು, ಮೇ 30ರಂದು ಇಲ್ಲಿನ ಕರ್ತವ್ಯದಿಂದ ಬಿಡುಗಡೆಯಾಗಿ ಮುನಿರಾಬಾದ್ ಘಟಕಕ್ಕೆ ಮರಳುವವರಿದ್ದರೆನ್ನಲಾಗಿದೆ. ಠಾಣೆಯ ಬಳಿಯ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್‌ನಲ್ಲಿ ವಾಸವಾಗಿರುವ ಇವರು, ಈ ಮಧ್ಯೆ ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದು, ಅಲ್ಲೇ ಸಮೀಪದ ಹಾಡಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಮೇ 28ರಂದು ರಾತ್ರಿ ಊಟ ಮುಗಿಸಿ ಮಲಗಿದ್ದ ಮಲ್ಲಿಕಾರ್ಜುನ್, ಬೆಳಗ್ಗೆ ನಾಪತ್ತೆ ಯಾಗಿದ್ದರು. ಈ ಹಿನ್ನೆಲೆಯಲ್ಲಿ ಜೊತೆಗಿದ್ದವರು ಅವರನ್ನು ಸುತ್ತಮತ್ತಲಿನ ಹಾಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಮಲ್ಲಿಕಾರ್ಜುನ ಗುಬ್ಬಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರೆಂದು ತಿಳಿದುಬಂದಿದೆ.

ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುನಿರಬಾದ್ ಕೆಎಸ್‌ಆರ್‌ಪಿ ಘಟಕದ ಎಸ್ಪಿ ಕಮಾಂಡೆಂಟ್ ಮಹದೇವ ಪ್ರಸಾದ್ ಕುಂದಾಪುರಕ್ಕೆ ಆಗಮಿಸುತ್ತಿದ್ದಾರೆ. ಬಳಿಕ ಮೃತದೇಹವನ್ನು ಎಸ್ಪಿ ಮೂಲಕ ಘಟಕಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News