ಅಗತ್ಯವಿದ್ದರೆ ಮಾತ್ರ ಪ್ರಯಾಣಿಸಿ:‘ದುರ್ಬಲ’ ವಲಸೆ ಕಾರ್ಮಿಕರಿಗೆ ರೈಲ್ವೆ ಸಚಿವರ ಆಗ್ರಹ

Update: 2020-05-29 16:16 GMT

ಹೊಸದಿಲ್ಲಿ, ಮೇ 29: ಅನಾರೋಗ್ಯ ಪೀಡಿತರು, ಗರ್ಭಿಣಿಯರು, 65 ವರ್ಷಕ್ಕಿಂತ ಹೆಚ್ಚಿನ ಪ್ರಾಯದವರು ಮತ್ತು 10 ವರ್ಷಕ್ಕೂ ಕಡಿಮೆ ಪ್ರಾಯದ ಮಕ್ಕಳು ಅಗತ್ಯವಿದ್ದರೆ ಮಾತ್ರ ವಿಶೇಷ ಶ್ರಮಿಕ್ ರೈಲುಗಳಲ್ಲಿ ಪ್ರಯಾಣಿಸುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ವಲಸೆ ಕಾರ್ಮಿಕರನ್ನು ಆಗ್ರಹಿಸಿದ್ದಾರೆ.

48 ಗಂಟೆಗಳ ಅವಧಿಯಲ್ಲಿ ಶ್ರಮಿಕ್ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ ಒಂಭತ್ತು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು ಮೇ 27ರಂದು ವರದಿಯಾಗಿತ್ತು. ಮೃತರೆಲ್ಲ ಅನಾರೋಗ್ಯ ಪೀಡಿತರಾಗಿದ್ದರು ಎಂದು ರೈಲ್ವೆಯು ತಿಳಿಸಿತ್ತು.

‘ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗಗಳು, ಕ್ಯಾನ್ಸರ್‌ನಂತಹ ಕಾಯಿಲೆ ಪೀಡಿತರು, ಗರ್ಭಿಣಿಯರು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮತ್ತು 65 ವರ್ಷಕ್ಕೂ ಹೆಚ್ಚಿನ ಪ್ರಾಯದ ವ್ಯಕ್ತಿಗಳು ಅಗತ್ಯವಲ್ಲದಿದ್ದರೆ ಶ್ರಮಿಕ್ ರೈಲುಗಳಲ್ಲಿ ಪ್ರಯಾಣವನ್ನು ನಿವಾರಿಸಬಹುದು ಎಂದು ರೈಲ್ವೆ ಸಚಿವಾಲಯವು ಕೋರಿಕೊಳ್ಳುತ್ತಿದೆ’ ಎಂಬ ಭಾರತೀಯ ರೈಲ್ವೆಯ ಸುತ್ತೋಲೆಯನ್ನು ಗೋಯಲ್ ರಿಟ್ವೀಟ್ ಮಾಡಿದ್ದಾರೆ.

ಶ್ರಮಿಕ್ ರೈಲು ಸೇವೆಯನ್ನು ಬಳಸಿಕೊಳ್ಳುತ್ತಿರುವ ಕೆಲವರು ಅನಾರೋಗ್ಯ ಪೀಡಿತರಾಗಿರುವುದು ಕಂಡುಬಂದಿದೆ ಮತ್ತು ಇದು ಕೋವಿಡ್-19 ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಅವರು ಎದುರಿಸುತ್ತಿರುವ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಸಚಿವಾಲಯವು ಸುತ್ತೋಲೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News