ಕೊರೋನ ಸೋಂಕಿತರಿಗೆ ಆದ್ಯತೆಯ ಮಧ್ಯೆ ಅಪಘಾತಕ್ಕೀಡಾದ ವಲಸೆ ಕಾರ್ಮಿಕರ ನಿರ್ಲಕ್ಷ್ಯ : ಆರೋಪ

Update: 2020-05-29 17:18 GMT

ಮಂಗಳೂರು, ಮೇ 29: ಕೊರೋನ ಸೋಂಕಿತರಿಗೆ ಆದ್ಯತೆ ನೀಡುವ ಭರಾಟೆಯಲ್ಲಿ ಅಪಘಾತಕ್ಕೀಡಾದ ವಲಸೆ ಕಾರ್ಮಿಕರ ಬಗ್ಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ನಿರ್ಲಕ್ಷಿಸಿದ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಈ ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯಲ್ಲೂ ಸಂಬಂಧವೇ ಇಲ್ಲದ ಸಮಾಜ ಸೇವಕರ ಕಳಕಳಿಗೂ ಆಡಳಿತ ವ್ಯವಸ್ಥೆಯು ಸ್ಪಂದಿಸದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ವಿವರ: ಪಶ್ಚಿಮ ಬಂಗಾಳ ಮೂಲದ ಗೋವಿಂದ್, ಅಮಿತ್ ಮತ್ತು ಜೋಸೆಫ್ ಎಂಬವರು ಮೇ 26ರ ರಾತ್ರಿ ತೀರ್ಥಹಳ್ಳಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಇನ್ನೊಂದು ಬೈಕ್ ಢಿಕ್ಕಿ ಹೊಡೆದಿತ್ತು. ಇದರಿಂದ ಗೋವಿಂದ್ ಮತ್ತು ಅಮಿತ್ ಎಂಬವರು ಗಂಭೀರ ಗಾಯ ಗೊಂಡರು. ಮಾಹಿತಿ ತಿಳಿದ ಸ್ಥಳೀಯರಾದ ರಫೀಕ್ ಮತ್ತು ಹೈದರ್ ಎಂಬವರು ಈ ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಈ ವಿಷಯ ತಿಳಿದುಕೊಂಡ ಪಡುಬಿದ್ರೆಯ ಆಪತ್ಬಾಂಧವ ಆಸೀಫ್ ಎಂಬವರು ಕೂಡ ರಫೀಕ್ ಮತ್ತು ಹೈದರ್‌ರ ಜೊತೆ ಸೇರಿಕೊಂಡರು. ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 5-6 ಲಕ್ಷ ರೂ. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ ಮೇರೆಗೆ ನೇರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅದೀಗ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಗೊಂಡ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ವೆನ್ಲಾಕ್‌ನ ವೈದ್ಯರು ಸೂಚಿಸಿದರು. ಹಾಗೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ವಲಸೆ ಕಾರ್ಮಿಕರಲ್ಲಿ ಬಿಪಿಎಲ್ ರೇಶನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕೂಡ ಇದ್ದ ಕಾರಣ ಆರೋಗ್ಯ ಕಾರ್ಡ್ ಮೂಲಕ ಉಚಿತ ಚಿಕಿತ್ಸೆ ಕೊಡಿಸಲು ತೀರ್ಥಹಳ್ಳಿಯ ರಫೀಕ್ ಮತ್ತು ಹೈದರ್ ಹಾಗೂ ಆಪತ್ಭಾಂಧವ ಆಸೀಫ್ ಪ್ರಯತ್ನಿಸಿದರು. ಆದರೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಯವರು ಹೊರ ರಾಜ್ಯದವರಿಗೆ ಆರೋಗ್ಯ ಕಾರ್ಡ್ ಮೂಲಕ ಉಚಿತ ಚಿಕಿತ್ಸೆ ಕೊಡಲಾಗುವುದಿಲ್ಲ ಎಂದು ಹೇಳಿಕೊಂಡರು. ಈ ಬಗ್ಗೆ ಮಾಹಿತಿ ಪಡೆದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ದ.ಕ. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಕೊನೆಗೆ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯ ಜೊತೆ ಮಾತುಕತೆ ನಡೆಸಿದರು. ವೆನ್ಲಾಕ್ ವೈದ್ಯಾಧಿಕಾರಿಯ ಸೂಚನೆಯ ಹೊರತಾಗಿಯೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯವರು ಆರೋಗ್ಯ ಕಾರ್ಡ್ ಯೋಜನೆಯಡಿ ಉಚಿತ ಚಿಕಿತ್ಸೆ ಕೊಡಿಸಲು ನಿರಾಕರಿಸಿದರು ಎನ್ನಲಾಗಿದೆ. ಅಷ್ಟರಲ್ಲಾಗಲೇ ರಫೀಕ್ ತೀರ್ಥಹಳ್ಳಿ ಸಾವಿರಾರು ರೂಪಾಯಿಯನ್ನು ಖರ್ಚು ಮಾಡಿಯಾಗಿತ್ತು.

ಕೊನೆಗೆ ಈ ವಲಸೆ ಕಾರ್ಮಿಕರನ್ನು ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಯಿತು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡ ಆಪತ್ಬಾಂಧವ ಆಸೀಫ್ ವೀಡಿಯೋಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟರು. ಅದನ್ನು ತಿಳಿದುಕೊಂಡ ಆಸ್ಪತ್ರೆಯವರು ಆಸೀಫ್ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಿದರು.

ಗಂಭೀರ ಗಾಯಗೊಂಡಿದ್ದ ವಲಸೆ ಕಾರ್ಮಿಕರನ್ನು ಹಾಸನದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆಯಲ್ಲಿರುವಾಗಲೇ ಪೊಲೀಸರು ಹಾಜರಾಗಿ ಆಸೀಫ್‌ರನ್ನು ಠಾಣೆಗೆ ಕರೆದೊಯ್ದು ಜಾಮೀನುಮುಚ್ಚಳಿಕೆ ಬರೆಯಿಸಿಕೊಂಡರು. ಅಂತೂ ವಲಸೆ ಕಾರ್ಮಿಕರನ್ನು ಹಾಸನದ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಅಲ್ಲೂ ಕೂಡ ಅವರನ್ನು ದಾಖಲಿಸಲು ನಿರಾಕರಿಸಲಾಯಿತು. ಕೊನೆಗೂ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲೂ ಕೂಡ ಶಸ್ತ್ರಚಿಕಿತ್ಸೆ ನಡೆಸಲು ಹಣ ಪಾವತಿಸಲು ಒತ್ತಾಯಿಸಲಾಗುತ್ತಿದೆ ಎಂಬ ಮಾಹಿತಿ ‘ಪತ್ರಿಕೆ’ಗೆ ಲಭಿಸಿದೆ.

ಆದರೆ ವಲಸೆ ಕಾರ್ಮಿಕರ ಬಳಿ ಆಸ್ಪತ್ರೆಗೆ ಪಾವತಿಸಲು ಹಣವಿಲ್ಲ. ಈಗಾಗಲೆ ಸಾವಿರಾರು ರೂಪಾಯಿಯನ್ನು ಖರ್ಚು ಮಾಡಿರುವ ರಫೀಕ್ ತೀರ್ಥಹಳ್ಳಿ ಮತ್ತೆ ಒಂದಷ್ಟು ಹಣ ಹೊಂದಿಸಿ ಶಸ್ತ್ರಚಿಕಿತ್ಸೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರೊಂದಿಗೆ ಹೈದರ್ ತೀರ್ಥಹಳ್ಳಿ, ಆಪತ್ಬಾಂಧವ ಆಸೀಫ್, ಮುನೀರ್ ಕಾಟಿಪಳ್ಳ ಕೂಡ ಕೈ ಜೋಡಿಸಿದ್ದಾರೆ. ಇವರ ಈ ಸಾಮಾಜಿಕ ಕಳಕಳಿಗೆ ಸರಕಾರಿ-ಖಾಸಗಿ ವೈದ್ಯರ ಸ್ಪಂದನೆ ಮಾತ್ರ ಶೂನ್ಯ ಎಂಬ ಮಾತು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಕೊರೋನ ಸೋಂಕು ರೋಗ ನಿಗ್ರಹಕ್ಕೆ ಆದ್ಯತೆ ನೀಡುವ ಭರಾಟೆಯಲ್ಲಿ ಸರಕಾರಿ ಮತ್ತು ಸರಕಾರಿ ಸಂಯೋಜಿತ ಖಾಸಗಿ ಆಸ್ಪತ್ರೆಯವರು ಇತರ ರೋಗಿಗಳ ಬಗ್ಗೆ ಅದರಲ್ಲೂ ಅಪಘಾತದಂತಹ ಪ್ರಕರಣದ ಬಗ್ಗೆ ದಿವ್ಯ ನಿರ್ಲಕ್ಷ ತಾಳುತ್ತಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಡಿಸಿ-ಡಿಎಚ್‌ಒ ಸ್ಪಂದಿಸಲಿಲ್ಲ

ಅಪಘಾತ ನಡೆದದ್ದು ತೀರ್ಥಹಳ್ಳಿಯಲ್ಲಿ. ಗಾಯಗೊಂಡವರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು. ಸಾಮಾಜಿಕ ಕಳಕಳಿಯಿಂದ ಸ್ಥಳೀಯ ಗುತ್ತಿಗೆದಾರ ರಫೀಕ್ ಮತ್ತವರ ಸ್ನೇಹಿತ ಹೈದರ್ ಮಣಿಪಾಲದ ಖಾಸಗಿ ಆಸ್ಪತ್ರೆಗೆ ತಕ್ಷಣ ಗಾಯಾಳುಗಳನ್ನು ದಾಖಲಿಸಿದರು. ಅಲ್ಲಿ ಚಿಕಿತ್ಸೆಗೆ ದುಬಾರಿ ವೆಚ್ಚವಾಗಬಹುದು ಎಂದು ತಿಳಿಯುತ್ತಲೇ ವೆನ್ಲಾಕ್‌ಗೆ ಕರೆತಂದರು. ಅಲ್ಲಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾ ಯಿತು. ಅಲ್ಲಿ ಆರೋಗ್ಯ ಕಾರ್ಡ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲು ನಿರಾಕರಿಸಲಾಯಿತು. ಮಾಹಿತಿ ತಿಳಿದ ನಾನು ದ.ಕ.ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಸತತವಾಗಿ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅವರಿಬ್ಬರೂ ಫೋನ್ ರಿಸೀವ್ ಮಾಡಲಿಲ್ಲ. ಕೊನೆಗೆ ವೆನ್ಲಾಕ್‌ನ ವೈದ್ಯಾಧಿಕಾರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ಆದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಹಾಸನದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲೂ ದಾಖಲಿಸಲಿಲ್ಲ. ಅಂತೂ ಬೆಂಗಳೂರಿನ ಸಂಜಯ್‌ಗಾಂಧಿ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಯಿತು. ಎಲ್ಲಾ ಕಡೆಯೂ ಹಣಕ್ಕಾಗಿ ಬೇಡಿಕೆ ಮುಂದಿಟ್ಟರೇ ವಿನಃ ಜೀವ ಉಳಿಸುವ ಪ್ರಯತ್ನ ಮಾಡಲಿಲ್ಲ. ತೀರ್ಥಹಳ್ಳಿಯ ರಫೀಕ್‌ಗೂ ವಲಸೆ ಕಾರ್ಮಿಕರಿಗೂ ಯಾವುದೇ ಸಂಬಂಧವಿಲ್ಲ. ಆದರೂ ರಫೀಕ್, ಹೈದರ್, ಆಸೀಫ್ ಮಾನವೀಯ ಕಳಕಳಿಯಿಂದ ಗಾಯಾಳುಗಳಿಗೆ ಸ್ಪಂದಿಸಿದ್ದಾರೆ.

ರಫೀಕ್ ಅವರಂತೂ ಈಗಾಗಲೆ 1 ಲಕ್ಷ ರೂ.ವರೆಗೆ ಖರ್ಚು ಮಾಡಿದ್ದಾರೆ. ಅಪಘಾತ ನಡೆದು ಮೂರು ದಿನಗಳಾಗಿವೆ. ಹಣವಿಲ್ಲದ ಕಾರಣ ತುರ್ತು ಶಸ್ತ್ರಚಿಕಿತ್ಸೆಯೂ ಆಗಿಲ್ಲ. ವಲಸೆ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಆದರೆ ನಮ್ಮ ಆಡಳಿತ ವ್ಯವಸ್ಥೆಗೆ ಆ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿರುವುದು ವಿಪರ್ಯಾಸ. ಇವೆಲ್ಲದರ ಮಧ್ಯೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನಗೊಂಡ ಆಸೀಫ್ ಅವರು ವೀಡಿಯೋಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅದು ಅಪರಾಧ ಎಂದು ಬಿಂಬಿಸಿ ಅವರ ವಿರುದ್ಧ ಉಳ್ಳಾಲ ಠಾಣೆಗೆ ದೂರು ನೀಡಲಾಯಿತು.

ಗಾಯಾಳುಗಳನ್ನು ಹಾಸನಕ್ಕೆ ಕರೆದೊಯ್ಯುವುದರಲ್ಲಿ ತಲ್ಲೀನರಾಗಿದ್ದ ಆಸೀಫ್‌ರನ್ನೇ ಪೊಲೀಸರು ತರಾತುರಿಯಲ್ಲಿ ಠಾಣೆಗೆ ಕರೆದೊಯ್ದರು. ಜಾಮೀನು ಮುಚ್ಚಳಿಕೆ ಬರೆಸಿಕೊಂಡರು. ಇದೆಲ್ಲಾ ನಮ್ಮನ್ನು ಆಳುವವರ ಕಾರ್ಯವೈಖರಿ. ಅಪಘಾತದಲ್ಲಿ ಗಾಯಗೊಂಡವರು ಆ ವಲಸೆ ಕಾರ್ಮಿಕರ ಬದಲು ಶ್ರೀಮಂತರ, ಅಧಿಕಾರಿಗಳ, ಜನಪ್ರತಿನಿಧಿಗಳಿಗೆ ಬೇಕಾದವರು ಯಾರಾದರು ಆಗಿದ್ದರೆ ಇವರೆಲ್ಲಾ ಯಾವ ರೀತಿ ಸ್ಪಂದಿಸು ತ್ತಿದ್ದರು ಅಂತ ಯೋಚಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ.

- ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News