ಏಮ್ಸ್: ವೈದ್ಯರು, ನರ್ಸ್ ಸಹಿತ ಒಟ್ಟು 195 ಆರೋಗ್ಯ ಸಿಬ್ಬಂದಿಗೆ ಕೊರೋನ ಸೋಂಕು

Update: 2020-05-29 17:56 GMT

ಹೊಸದಿಲ್ಲಿ, ಮೇ. 29: ಇತ್ತೀಚಿನ ದಿನಗಳಲ್ಲಿ ದಿಲ್ಲಿಯ ಅಖಿಲಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್)ನ ಹಲವಾರು ಆರೋಗ್ಯ ಕಾರ್ಯಕರ್ತರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ಭಾರೀ ಆತಂಕ ಮೂಡಿಸಿದೆ.

ವೈದ್ಯರು, ನರ್ಸ್‌ಗಳು, ಮೆಸ್ ನೌಕರರು, ಪ್ರಯೋಗಾಲಯ ಸಿಬ್ಬಂದಿ, ತಂತ್ರಜ್ಞರು, ನೈರ್ಮಲ್ಯ ಸಿಬ್ಬಂದಿ ಸೇರಿದಂತೆ ಏಮ್ಸ್‌ನ, 195ಆರೋಗ್ಯಪಾಲನಾ ಕಾರ್ಯಕರ್ತರಿಗೆ ಕೊರೋನ ತಗಲಿರುವುದು ದೃಢಪಟ್ಟಿದೆ.

ಕೊರೋನ ಸೋಂಕು ತಗಲಿದ್ದ ಏಮ್ಸ್‌ನ ನಿರ್ಮಲೀಕರಣ (ಸ್ಯಾನಿಟೇಶನ್) ವಿಭಾಗದ ವರಿಷ್ಠ, ಮೂರು ದಿನಗಳ ಹಿಂದೆ ಮೃತಪಟ್ಟಿದ್ದರೆ, ಕಳೆದ ವಾರ ಮೆಸ್ ಉದ್ಯೋಗಿಯೊಬ್ಬ ಅಸುನೀಗಿದ್ದರು. ಏಮ್ಸ್‌ನ ಅನೇಕ ಉದ್ಯೋಗಿಗಳಿಗೆ ಕೇವಲ ಕೈಗವಸು ಹಾಗೂ ಮಾಸ್ಕ್‌ಗಳನ್ನು ಮಾತ್ರ ಒದಗಿಸಲಾಗಿದ್ದು, ಅವರಿಗೆ ವೈಯಕ್ತಿಕ ಸುರಕ್ಷತೆ ಉಪಕರಣ (ಪಿಪಿಇ) ಗಳನ್ನು ಈವರೆಗೆ ನೀಡಿಲ್ಲವೆಂದು ತಿಳಿದುಬಂದಿದೆ.

‘‘ನಾವು ಭಯಪಡಬೇಕಾಗಿರುವುದು ವೈರಸ್‌ಗಲ್ಲ. ಸರಕಾ ಹಾಗೂ ಏಮ್ಸ್ ಆಡಳಿತದ ಪಕ್ಷಪಾತದ ಧೋರಣೆ ನಮ್ಮನ್ನು ಚಿಂತೆಗೀಡು ಮಾಡಿದೆ. ಒಂದು ವೇಳೆ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆರೋಗ್ಯ ಕಾರ್ಯಕರ್ತರ ಕೊರತೆಯುಂಟಾಗಲಿದೆ. ಆಸ್ಪತ್ರೆಯ ಆವರಣದ ಸುರಕ್ಷತೆ, ಕಳಪೆ ನೈರ್ಮಲ್ಯ ವ್ಯವಸ್ಥೆ, ಸಮರ್ಪಕವಾದ ಕ್ವಾರಂಟೈನ್ ವ್ಯವಸ್ಥೆಯ ಕೊರತೆ ಹಾಗೂ ಸೂಕ್ತವಾದ ತಪಾಸಣೆಗೆ ಆಗ್ರಹಿಸಿ ಕಳೆದ ಮಾರ್ಚ್‌ನಿಂದಲೂ ನಾವು ಸರಕಾರಕ್ಕೆ ಪತ್ರ ಬರೆಯುತ್ತಿದ್ದೇವೆ ಹಾಗೂ ಹೋರಾಡುತ್ತಾ ಬಂದಿದ್ದೇವೆ” ಎಂದು ಹೊಸದಿಲ್ಲಿ ಏಮ್ಸ್‌ನ ಆರ್‌ಡಿಎ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ್ ರಾಜಕುಮಾರ್ ಟಿ. ತಿಳಿಸಿದ್ದಾರೆ.

ಕೋವಿಡ್19 ಹಾವಳಿಯ ಆರಂಭದಿಂದಲೂಏಮ್ಸ್‌ನ ಆರೋಗ್ಯ ಪಾಲನಾ ಕಾರ್ಯಕರ್ತರಿಗೆ ಉತ್ತಮ ಗುಣಮಟ್ಟದ ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ಗಳ ಕೊರತೆಯನು ಎದುರಿಸುತ್ತಿದ್ದಾರೆಂದು ಶ್ರೀನಿವಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News