ಕೊರೋನ ವೈರಸ್: ಭಾರತದಲ್ಲಿ ಒಂದೇ ದಿನ 7,964 ಮಂದಿಗೆ ಸೋಂಕು ದೃಢ

Update: 2020-05-30 07:15 GMT

 ಹೊಸದಿಲ್ಲಿ, ಮೇ 30: ಭಾರತದಲ್ಲಿ ಒಂದೇ ದಿನ ಕೊರೋನ ವೈರಸ್‌ಗೆ ತುತ್ತಾದ ಹೊಸ ರೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಸೋಂಕಿಗೆ ಸಂಬಂಧಿಸಿ ಮೃತಪಟ್ಟವರ ಸಂಖ್ಯೆಯಲ್ಲೂ ಏರಿಕೆಯಾಗಿದೆ.

 ಕಳೆದ 24 ಗಂಟೆಗಳ ಅವಧಿಯಲ್ಲಿ 7,964 ಹೊಸ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 265 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲೀಗ ಒಟ್ಟು ಪ್ರಕರಣಗಳ ಸಂಖ್ಯೆಯು 1,73,763 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬೆಳಗ್ಗೆ ಹಂಚಿಕೊಂಡ ಅಂಕಿ-ಅಂಶದಲ್ಲಿ ತಿಳಿದುಬಂದಿದೆ.

ದೇಶದಲ್ಲಿ ಕೊರೋನ ವೈರಸ್ ಅಟ್ಟಹಾಸ ಆರಂಭವಾದ ಬಳಿಕ ಒಟ್ಟು 4,971 ಜನರು ಸಾವನ್ನಪ್ಪಿದ್ದಾರೆ. ಅದೇ ರೀತಿ ಈ ತನಕ 80,000ಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ಪೈಕಿ ಕಳೆದ 24 ಗಂಟೆಗಳ ಅವಧಿಯಲ್ಲಿ 11,264 ರೋಗಿಗಳು ಚೇತರಿಸಿಕೊಂಡಿದ್ದು, ಇದೊಂದು ದಾಖಲೆಯಾಗಿದೆ. ಸತತ ಎರಡನೇ ದಿನ ದಿನವೊಂದಕ್ಕೆ 7,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಭಾರತ ಈಗಾಗಲೇ ಕೊರೋನ ವೈರಸ್‌ನಿಂದ ಬಾಧಿತವಾಗಿರುವ ವಿಶ್ವದ 9ನೇ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News