ಮೋದಿ ಕಳೆದ ಆರು ವರ್ಷಗಳಲ್ಲಿ ಹಲವು ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಿದ್ದಾರೆ: ಅಮಿತ್ ಶಾ

Update: 2020-05-30 07:37 GMT

ಹೊಸದಿಲ್ಲಿ, ಮೇ 30: ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ಆರು ವರ್ಷಗಳಲ್ಲಿ ಹಲವು ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಗ್ಗೆ ಹೇಳಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಎರಡನೇ ಅವಧಿಗೆ ಶನಿವಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಆರು ವರ್ಷಗಳಲ್ಲಿ ಪಕ್ಷದ ಮನೆಮನೆಯ ಸಂದೇಶಕಾರರಾಗಿ ಕಾರ್ಯನಿರ್ವಹಿಸಿದ್ದ ಪಕ್ಷದ ಕೋಟ್ಯಂತರ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆನು ಎಂದ ಅಮಿತ್ ಶಾ, ಹಲವು ಸಾಧನೆಗಳಿಗೆ ಸಾಕ್ಷಿಯಾದ ಐತಿಹಾಸಿಕ ವರ್ಷಕ್ಕೆ ಪ್ರಧಾನಿ ಮೋದಿಗೆ ನಾನು ಅಭಿನಂದನೆ ಸಲ್ಲಿಸುವೆ. ನಿಮ್ಮ ದಕ್ಷ ಹಾಗೂ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಇದೇ ರೀತಿಯ ಅಭಿವೃದ್ಧಿಯನ್ನು ಮುಂದುವರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧತಿ, ಹೊಸ ಪೌರತ್ವ ಕಾಯ್ದೆ ಸಹಿತ ಸರಕಾರದ ಹಲವು ನಿರ್ಧಾರಗಳನ್ನು 55ರ ವಯಸ್ಸಿನ ಬಿಜೆಪಿಯ ಹಿರಿಯ ನಾಯಕ ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿದರು.

ಈ ಹಿಂದಿನ ಕಾಂಗ್ರೆಸ್ ನಾಯಕತ್ವದ ಆಡಳಿತವನ್ನು ಟೀಕಿಸಿದ ಶಾ, ಕಳೆದ ಆರು ವರ್ಷಗಳಲ್ಲಿ ಮೋದಿ ಅವರು ಹಲವು ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಿದ್ದಲ್ಲದೆ...ಕಳೆದ ಆರು ದಶಕಗಳಲ್ಲಿ ಸೃಷ್ಟಿಯಾಗಿರುವ ನಿರ್ವಾತವನ್ನು ಅವರು ತುಂಬಿದ್ದಾರೆ. ಸ್ವಾವಲಂಬಿ ಭಾರತಕ್ಕೆ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಕಳೆದ ಆರು ವರ್ಷಗಳ ಆಡಳಿತ ಬಡವರ ಕಲ್ಯಾಣಕ್ಕೆ ಉತ್ತಮ ನಿದರ್ಶನವಾಗಿದೆ ಎಂದರು.

ಬಿಜೆಪಿಯ ಕಾರ್ಯಕರ್ತರು ಸರಕಾರದ ಸಾಧನೆಗಳು ಹಾಗೂ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಈ ಐತಿಹಾಸಿಕ ದಿನದಂದು ಕೋಟ್ಯಂತರ ಪರಿಶ್ರಮಿ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ. ಕಾರ್ಯಕರ್ತರು ಸರಕಾರದ ಆರು ವರ್ಷಗಳ ಸಾಧನೆಯನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಕಠಿಣ ಶ್ರಮ ಹಾಗೂ ತ್ಯಾಗಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವೆ ಎಂದು ಮಾಜಿ ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News