ಹಾಂಕಾಂಗ್‍ಗೆ ನೀಡಲಾದ ವಿಶೇಷ ಸವಲತ್ತುಗಳು ವಾಪಸ್: ಚೀನಾಗೆ ಟ್ರಂಪ್ ತಿರುಗೇಟು

Update: 2020-05-30 09:29 GMT

ವಾಷಿಂಗ್ಟನ್ : ಹಾಂಕಾಂಗ್‍ನಲ್ಲಿ ಚೀನಾ ಜಾರಿಗೊಳಿಸಲುದ್ದೇಶಿಸಿರುವ ವಿವಾದಿತ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ವಿರೋಧಿಸಿ ಹಾಗೂ ವಾಣಿಜ್ಯ ಕೇಂದ್ರವಾದ ಹಾಂಕಾಂಗ್ ಮೇಲೆ ಬೀಜಿಂಗ್ ನಿಯಂತ್ರಣ ಸಾಧಿಸಲು ನಡೆಸುತ್ತಿರುವ ಯತ್ನ ವಿರೋಧಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶ ಹಾಂಕಾಂಗ್‍ಗೆ ನೀಡಿದ್ದ ವಿಶೇಷ ಸವಲತ್ತುಗಳನ್ನು ವಾಪಸ್ ಪಡೆಯುವುದಾಗಿ ಹಾಗೂ ಕೆಲ ಚೀನೀ ವಿದ್ಯಾರ್ಥಿಗಳ ಮೇಲೆ ಅಮೆರಿಕಾ ವಿಶ್ವವಿದ್ಯಾಲಯಗಳಲ್ಲಿ ನಿಷೇಧ ಹೇರುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಅಮೆರಿಕಾ ಜತೆಗೆ ಬ್ರಿಟನ್ ಕೂಡ ಹೊಸ ಭದ್ರತಾ ಕಾಯಿದೆ ಕುರಿತಂತೆ ತನ್ನ ಕಳವಳವನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಜತೆ ವ್ಯಕ್ತಪಡಿಸಿದ್ದರೂ ಈ ವಿಚಾರಕ್ಕೆ ವಿಶ್ವ ಸಂಸ್ಥೆಯಲ್ಲಿ ಜಾಗವಿಲ್ಲ ಎಂದು ಚೀನಾ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೊಮ್ಮೆ ಬ್ರಿಟಿಷ್ ವಸಾಹತು ಪ್ರದೇಶವಾಗಿದ್ದ ಹಾಂಕಾಂಗ್ ಅನ್ನು ಚೀನಾ ನೋಡಿಕೊಳ್ಳುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಟ್ರಂಪ್, ಆ ನಗರದ  ಹೆಮ್ಮೆಯ ಸ್ಥಾನಮಾನವನ್ನು ಚೀನಾ ಕುಂದಿಸುತ್ತಿದೆ ಎಂದು ಆರೋಪಿಸಿದರು. "ಇದು ಹಾಂಕಾಂಗ್ ಜನರಿಗೆ, ಚೀನಾದ ಜನರಿಗೆ ಹಾಗೂ ಜಗತ್ತಿನ ಜನರಿಗೆ ಒಂದು ದುರಂತ,'' ಎಂದು ಟ್ರಂಪ್ ಹೇಳಿದರು.

ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಪರ ಇದೆ ಎಂದು ಆರೋಪಿಸಿರುವ ಟ್ರಂಪ್ ತಾವು ವಿಶ್ವ ಆರೋಗ್ಯ ಸಂಸ್ಥೆಯ ಜತೆಗೂ ಸಂಬಂಧ ಕಡಿದುಕೊಳ್ಳುತ್ತಿರುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News