2020ರ ಫೋರ್ಬ್ಸ್ ಶ್ರೀಮಂತ ಕ್ರೀಡಾಳುಗಳ ಅಗ್ರ-100ರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ

Update: 2020-05-30 10:02 GMT

ಹೊಸದಿಲ್ಲಿ, ಮೇ 30: ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿದ 2020ರ ಶ್ರೀಮಂತ ಕ್ರೀಡಾಳುಗಳ ಅಗ್ರ-100ರ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಕ್ರೀಡಾಳು ಹಾಗೂ ಏಕೈಕ ಕ್ರಿಕೆಟ್‌ಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಫೋರ್ಬ್ಸ್ ‌ಪ್ರಕಾರ ಕೊಹ್ಲಿ ಒಟ್ಟು 26 ಮಿಲಿಯನ್ ಅಮೆರಿಕನ್ ಡಾಲರ್(24 ಮಿ.ಜಾಹೀರಾತು ಆದಾಯ ಹಾಗೂ 2 ಮಿ.ವೇತನ/ಪ್ರಶಸ್ತಿ ಮೊತ್ತ)ಆದಾಯ ಗಳಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಕಳೆದ ವರ್ಷ(2019)ಕ್ಕಿಂತ 30 ಸ್ಥಾನ ಮೇಲಕ್ಕೇರಿದ್ದಾರೆ. ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದ್ದಾರೆ.

 ಕ್ರೀಡಾಪಟುಗಳ ಬಹುಮಾನ ಮೊತ್ತ, ವೇತನ, ಗುತ್ತಿಗೆ ಬೋನಸ್‌ಗಳು, ಜಾಹೀರಾತು ಒಪ್ಪಂದದ ಆದಾಯ, ರಾಯಲ್ಟಿಸ್ ಒಳಗೊಂಡಂತೆ 2019ರ ಜೂ.1 ಹಾಗೂ 2020ರ ಜೂ.1ರ ತನಕದ ಆದಾಯದ ಲೆಕ್ಕಾಚಾರದಲ್ಲಿ ಫೋರ್ಬ್ಸ್ ತನ್ನ ಪಟ್ಟಿಯನ್ನು ಸಿದ್ಧಪಡಿಸುತ್ತದೆ.

ಕೊಹ್ಲಿ ಸತತ ಎರಡನೇ ವರ್ಷ ಫೋರ್ಬ್ಸ್‌ನ ಅಗ್ರ-100 ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. 2019ರಲ್ಲಿ 25 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದ ಕೊಹ್ಲಿ ಪಟ್ಟಿಯಲ್ಲಿ 100ನೇ ಸ್ಥಾನದಲ್ಲಿದ್ದರು.

ಇದೇ ವೇಳೆ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ ಫೋರ್ಬ್ಸ್ ಪಟ್ಟಿಯಲ್ಲಿರುವ ಅತ್ಯಂತ ಶ್ರೀಮಂತ ಕ್ರೀಡಾಪಟುವಾಗಿದ್ದಾರೆ. ಫೆಡರರ್ ಅವರ ಕಳೆದ 12 ತಿಂಗಳ ಅಂದಾಜು ಆದಾಯ 106.3 ಮಿಲಿಯನ್ ಡಾಲರ್. ಫೆಡರರ್ ಪೋರ್ಚುಗಲ್‌ನ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News