ವಲಸೆ ಕಾರ್ಮಿಕರಿಗೆ ನೆರವಾಗುವ ಸೋನು ಸೂದ್ ರ ನಿಸ್ವಾರ್ಥ ಸೇವೆಯ ಹಿಂದಿನ ಕಾರಣ ತಿಳಿಸಿದ ರೈಲ್ವೇ ಪಾಸ್!

Update: 2020-05-30 13:50 GMT

ಮುಂಬೈ: ಲಾಕ್‍ಡೌನ್‍ನಿಂದಾಗಿ ಅತಂತ್ರರಾಗಿರುವ ವಲಸಿಗ ಕಾರ್ಮಿಕರಿಗೆ ಆಹಾರ ಒದಗಿಸುವುದರ ಜತೆಗೆ  ಹಲವಾರು ಮಂದಿಯನ್ನು ಊರಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಿ, ಕೇರಳದ 150ಕ್ಕೂ ಅಧಿಕ ವಲಸಿಗ ಕಾರ್ಮಿಕರನ್ನು ಚಾರ್ಟರ್ಡ್ ವಿಮಾನದ ಮೂಲಕ ಅವರ ತವರು ರಾಜ್ಯಕ್ಕೆ ಕಳುಹಿಸಿ ಕೊಟ್ಟು ಎಲ್ಲರ ಮನಗೆದ್ದಿರುವ ಬಾಲಿವುಡ್ ನಟ ಸೋನು ಸೂದ್ ಅವರು 24ರ ಹರೆಯದವರಾಗಿದ್ದಾಗಿನ ಒಂದು ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ ಅವರ ಈ ಫೋಟೋ ಇರುವುದು 90ರ ದಶಕದ ಲೋಕಲ್ ಟ್ರೈನ್ ಪಾಸ್‍ನಲ್ಲಿ. ಅರವಿಂದ್ ಪಾಂಡೆ ಎಂಬ ಟ್ವಿಟ್ಟರಿಗ ಶೇರ್ ಮಾಡಿರುವ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.

ಸೋನು ಸೂದ್ ಅವರಿಗೆ 1997ರಲ್ಲಿ ಒದಗಿಸಲಾಗಿದ್ದ ಲೋಕಲ್ ಟ್ರೈನ್ ಪಾಸ್ ಇದಾಗಿದೆ ಹಾಗೂ  ಬೊರಿವಿಲಿ ಹಾಗೂ ಚರ್ಚ್‍ಗೇಟ್ ನಡುವೆ ರೈಲಿನಲ್ಲಿ ಸಂಚರಿಸಲು ರೂ 420 ತೆತ್ತು ಪಡೆಯಲಾಗಿದ್ದ ಪಾಸ್ ಇದಾಗಿತ್ತು. "ನಿಜವಾಗಿಯೂ ಜೀವನದಲ್ಲಿ ಕಷ್ಟ ಪಟ್ಟವರು ಮಾತ್ರ ಇತರರ ನೋವನ್ನು ಅರ್ಥೈಸಬಲ್ಲರು,'' ಎಂದು ಈ ಫೋಟೋ ಶೇರ್ ಮಾಡಿದ ಪಾಂಡೆ ಬರೆದಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಸೋನು ಸೂದ್ "ಲೈಫ್ ಈಸ್ ಎ ಫುಲ್ ಸರ್ಕಲ್,'' ಎಂದು ಬರೆದಿದ್ದಾರೆ.

ವಲಸಿಗ ಕಾರ್ಮಿಕರಿಗೆ ಸಹಾಯ ಮಾಡಲು ಕೈಲಾದಷ್ಟು ಶ್ರಮಿಸುತ್ತಿರುವ ಸೋನು ಸೂದ್ ಕಷ್ಟದಲ್ಲಿರುವವರಿಗಾಗಿ ಒಂದು ಸಹಾಯವಾಣಿಯನ್ನೂ ಆರಂಭಿಸಿದ್ದಾರಲ್ಲದೆ ತಮ್ಮನ್ನು ವಾಟ್ಸ್ಯಾಪ್ ಮೂಲಕ ಸಂಪರ್ಕಿಸಲು ಒಂದು ಸಂಖ್ಯೆಯನ್ನೂ ನೀಡಿದ್ದಾರೆ. ಪ್ರತಿಯೊಬ್ಬ ವಲಸಿಗ ಕಾರ್ಮಿಕ ತನ್ನ ಮನೆಯನ್ನು ತಲುಪಿದ ನಂತರವಷ್ಟೇ ತಮಗೆ ರಾತ್ರಿ ಚೆನ್ನಾಗಿ ನಿದ್ದೆ ಬರಲಿದೆ ಎಂದೂ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News