ಪಿಎಂ ಕೇರ್ಸ್‌ ಫಂಡ್ ಮಾಹಿತಿ ನೀಡಲು ಸಾಧ್ಯವಿಲ್ಲ!

Update: 2020-05-30 15:03 GMT

► ಪಿಎಂ ಕೇರ್ಸ್‌ ಫಂಡ್ ಸಾರ್ವಜನಿಕ ಪ್ರಾಧಿಕಾರವಲ್ಲ

► ಪಿಎಂ ಕೇರ್ಸ್‌ ಫಂಡ್‌ನ ಪಾರದರ್ಶಕತೆ ಬಗ್ಗೆ ಪ್ರತಿಪಕ್ಷಗಳ ಸಂಶಯ

ಹೊಸದಿಲ್ಲಿ, ಮೇ 30: ಕೊರೋನ ವೈರಸ್ ಸಾಂಕ್ರಾಮಿಕರೋಗ ಹಾವಳಿಯ ನಿರ್ವಹಣೆಗಾಗಿ ಕೇಂದ್ರ ಸರಕಾರ ಸ್ಥಾಪಿಸಿರುವ ಪಿಎಂ ಕೇರ್ಸ್‌ ಫಂಡ್ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ವಿವರಗಳನ್ನು ಒದಗಿಸಲು ಪ್ರಧಾನಿ ಕಾರ್ಯಾಲಯವು ನಿರಾಕರಿಸಿದೆಯೆಂದು ‘ಲೈವ್ ಮಿಂಟ್’ ಸುದ್ದಿ ಜಾಲತಾಣ ವರದಿ ಮಾಡಿದೆ.

ಪ್ರಧಾನಿಯವರ ಪೌರ ಸಹಾಯ ಹಾಗೂ ತುರ್ತು ಸಂದರ್ಭಗಳಿಗಾಗಿನ ಪರಿಹಾರ ನಿಧಿ (ಪಿಎಂ ಕೇರ್ಸ್‌ ಫಂಡ್)ರಚನೆಯ ಕುರಿತು ವಿವರಗಳನ್ನು ಕೋರಿ ಬೆಂಗಳೂರಿನ ಕಾನೂನು ವಿದ್ಯಾರ್ಥಿಯೊಬ್ಬರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಪಿಎಂ ಕೇರ್ಸ್‌ ಫಂಡ್‌ನ ಟ್ರಸ್ಟ್ ಡೀಡ್‌ನ ಪ್ರತಿಗಳು ಹಾಗೂ ನಿಧಿಯ ರಚನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಸರಕಾರಿ ಆದೇಶಗಳ ವಿವರಗಳನ್ನು ನೀಡುವಂತೆ ಕೋರಿದ್ದರು.

pmcares.gov.in ‘‘2005ರ ಆರ್‌ಟಿಐ ಕಾಯ್ದೆಯ ಸೆಕ್ಷನ್ 2(ಎಚ್) ವ್ಯಾಪ್ತಿಯಡಿ ಪಿಎಂ ಕೇರ್ಸ್‌ ಫಂಡ್ ಎಂಬುದು ಸಾರ್ವಜನಿಕ ಪ್ರಾಧಿಕಾರವಲ್ಲ. ಆದಾಗ್ಯೂ, ನಿಧಿಗೆ ಸಂಬಂಧಿಸಿದ ಮಾಹಿತಿ ’’ ವೆಬ್‌ಸೈಟ್‌ನಲ್ಲಿ ಲಭ್ಯವಿದೆ’’ ಎಂದು ಎಂದು ಪ್ರಧಾನಿ ಕಾರ್ಯಾಲಯ ಶುಕ್ರವಾರ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ತಿಳಿಸಿತ್ತು.

ಆದರೆ ಪಿಎಂಕೇರ್ಸ್‌ ಫಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ವಿವರಗಳು ಲಭ್ಯವಿಲ್ಲವೆಂದು ‘Live law’ ಸುದ್ದಿಜಾಲತಾಣ ತಿಳಿಸಿದೆ.

ಆರ್‌ಟಿಐ ಕಾಯ್ದೆ ಪ್ರಕಾರ ಸಂವಿಧಾನಾತ್ಮಕವಾಗಿ ಅಥವಾ ಸಂಸತ್‌ನಿಂದ ಜಾರಿಯಾದ ಕಾನೂನಿನ ಮೂಲಕ ಇಲ್ಲವೇ ಸರಕಾರದ ಅಧಿಸೂಚನೆ ಅಥವಾ ಅಧ್ಯಾದೇಶದಿಂದ ಸ್ಥಾಪನೆಯಾದ ಸಂಸ್ಥೆಯು ಸಾರ್ವಜನಿಕ ಪ್ರಾಧಿ ಕಾರವೆನಿಸಿಕೊಳ್ಳುತ್ತದೆ. ಸರಕಾರ ಅಥವಾ ಸರಕಾರೇತರ ಸಂಸ್ಥೆಗಳಿಂದ ಗಣನೀಯವಾಗಿ ಅರ್ಥಿಕ ನೆರವು ಪಡೆಯುತ್ತಿರುವ ಸಂಸ್ಥೆಗಳನ್ನು ಕೂಡಾ ಸಾರ್ವಜನಿಕ ಪ್ರಾಧಿಕಾರವೆಂದು ಪರಿಗಣಿಸಲಾಗುತ್ತದೆ.

ಹೀಗಿದ್ದೂ, ಪಿಎಂ ಕೇರ್ಸ್‌ ನಿಧಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ನಿರಾಕರಿಸಿದ್ದಕ್ಕಾಗಿ ಪ್ರಧಾನಿ ಕಾರ್ಯಾಲಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಅರ್ಜಿದಾರರು ತಿಳಿಸಿದ್ದಾರೆ. ಪಿಎಂಕೇರ್ಸ್‌ ಫಂಡ್, ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳು ನೀಡುವ ದೇಣಿಗೆಗಳನ್ನು ಸಂಬಂಧಿಸಿದ್ದಾಗಿರುವುದರಿಂದ ಭಾರತದ ಮಹಾಲೇಖಪಾಲರು (ಸಿಎಜಿ)ಅದರ ಲೆಕ್ಕಪರಿಶೋಧನೆ ಮಾಡುವುದಿಲ್ಲವೆದಂದು ಕೇಂದ್ರ ಸರಕಾರ ಕಳೆದ ತಿಂಗಳು ತಿಳಿಸಿತ್ತು.

ಪಿಎಂ ಕೇರ್ಸ್‌ ಫಂಡ್ ಮಾರ್ಚ್ 28ರಂದು ಸ್ಥಾಪನೆಯಾಗಿದ್ದು, ಪ್ರಧಾನಿ ಅದರ ಅಧ್ಯಕ್ಷರಾಗಿದ್ದು, ಸಂಪುಟದ ಹಿರಿಯ ಸದಸ್ಯರು ಟ್ರಸ್ಟಿಗಳಾಗಿದ್ದಾರೆ.

ಈಗಾಗಲೇ ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿ ಅಸ್ತಿತ್ವದಲ್ಲಿರುವುದರಿಂದ ಪ್ರತ್ಯೇಕ ನಿಧಿಯನ್ನು ಸ್ಥಾಪಿಸುವ ಅಗತ್ಯವಾದರೂ ಏನಿದೆಯೆಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಪಿಎಂ ಕೇರ್ಸ್‌ ಫಂಡ್‌ನ ಪಾರದರ್ಶಕತೆಯ ಬಗ್ಗೆಯೂ ಅವು ಸಂದೇಹಗಳನ್ನು ವ್ಯಕ್ತಪಡಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News