ತನ್ನ ಎರಡನೇ ಅಧಿಕಾರಾವಧಿಯ ‘ವಿಕಾಸ ಯಾತ್ರೆ’ಯನ್ನು ಜನರೊಂದಿಗೆ ಹಂಚಿಕೊಂಡ ಪ್ರಧಾನಿ ಮೋದಿ

Update: 2020-05-30 16:22 GMT

ಹೊಸದಿಲ್ಲಿ,ಮೇ 30: ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಎರಡನೇ ಅಧಿಕಾರಾವಧಿಯ ‘ವಿಕಾಸ ಯಾತ್ರ’ಯ ವಿವರಗಳು ಅಥವಾ ಅಭಿವೃದ್ಧಿ,ಸಬಲೀಕರಣ ಮತ್ತು ಸೇವೆಯ ಇಣುಕುನೋಟಗಳುಳ್ಳ ದಾಖಲೆಯನ್ನು ತನ್ನ ಟ್ವಿಟರ್ ಖಾತೆ ಮತ್ತು ವೆಬ್ ಪೋರ್ಟಲ್‌ನಲ್ಲಿ ಶನಿವಾರ ಶೇರ್ ಮಾಡಿಕೊಂಡಿದ್ದಾರೆ.

 ತನ್ನ ಎರಡನೇ ಅಧಿಕಾರಾವಧಿಯ ಮೊದಲ ವರ್ಷಾಚರಣೆಯ ಅಂಗವಾಗಿ ಮೋದಿಯವರು ಶೇರ್ ಮಾಡಿಕೊಂಡಿರುವ ದಾಖಲೆಯು ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಸರಕಾರವು ತೆಗೆದುಕೊಂಡ ಕ್ರಮಗಳನ್ನು ವಿವರಿಸಿದೆ.

ದಾಖಲೆಯು ಸುಗಮ ಉದ್ಯಮ ನಿರ್ವಹಣೆ,ಸುಗಮ ಬದುಕಿನಿಂದ ಹಿಡಿದು ಭ್ರಷ್ಟಾಚಾರದ ನಿರ್ಮೂಲನ ಮತ್ತು ಕೊರೋನ ವೈರಸ್ ವಿರುದ್ಧ ದೇಶದ ಹೋರಾಟದವರೆಗೆ 15 ಶೀರ್ಷಿಕೆಗಳನ್ನು ಒಳಗೊಂಡಿದೆ.

 ‘ಅಭಿವೃದ್ಧಿ,ಸಬಲೀಕರಣ ಮತ್ತು ಸೇವೆಯ ನಮ್ಮ ಸಾಮೂಹಿಕ ಪಯಣದ ಇಣುಕುನೋಟಗಳನ್ನು ನೀಡುವ ವಿಕಾಸ ಯಾತ್ರೆಯತ್ತ ಒಮ್ಮೆ ಕಣ್ಣು ಹಾಯಿಸಿ ’ಎಂದು ಮೋದಿ ದಾಖಲೆಯ ಜೊತೆಗೆ ಟ್ವೀಟಿಸಿದ್ದಾರೆ.

   ‘ಪ್ರಧಾನಿ ನರೇಂದ್ರ ಮೋದಿಯವರು 2019ರ ಚುನಾವಣೆಯನ್ನು ಗೆದ್ದು ಇನ್ನಷ್ಟು ಭಾರೀ ಜನಾದೇಶ ಮತ್ತು ಜನರ ಇನ್ನಷ್ಟು ಬೆಂಬಲದೊಂದಿಗೆ ಅಧಿಕಾರಕ್ಕೆ ಮರಳಿದ್ದಾರೆ. ಪ್ರಜಾಪ್ರಭುತ್ವ ದೇಶಗಳಲ್ಲಿ ಅಪರೂಪದ ವಿದ್ಯಮಾನವಾಗಿರುವ ಈ ಭಾರೀ ಬಹುಮತದ ಜನಾದೇಶವು ಸರಕಾರವು ತನ್ನ ಹಿಂದಿನ ಭರವಸೆಗಳನ್ನು ಈಡೇರಿಸಿದ್ದಕ್ಕೆ ಮತ್ತು ಪ್ರಧಾನಿಯವರು ಜನತೆಯ ಮುಂದಿರಿಸಿರುವ ನವಭಾರತದ ಭವಿಷ್ಯದ ಮಾರ್ಗಸೂಚಿಗೆ ಬೆಂಬಲವಾಗಿ ಲಭಿಸಿದೆ ಎಂದು ದಾಖಲೆಯಲ್ಲಿನ ಪೀಠಿಕೆಯಲ್ಲಿ ಹೇಳಲಾಗಿದೆ.

ಮೋದಿ 2.0 ಸರಕಾರದಿಂದ ನಿರೀಕ್ಷೆಗಳು ಮೊದಲ ಅಧಿಕಾರಾವಧಿಗಿಂತ ದೊಡ್ಡದಾಗಿವೆ ಎಂದು ಅದು ಹೇಳಿದೆ.

 ಜನತೆಯ ಭಾರಿ ಬೆಂಬಲಕ್ಕೆ ಸ್ಪಂದಿಸಿ ಮೋದಿ ಮತ್ತು ಅವರ ಸರಕಾರವು ಮೊದಲ ದಿನದಿಂದಲೇ ಬೃಹತ್ ಸುಧಾರಣೆಗಳು, ಬೃಹತ್ ನಿರ್ಧಾರಗಳು ಮತ್ತು ಬೃಹತ್ ಪರಿಕಲ್ಪನೆಗಳನ್ನು ಆರಂಭಿಸಿದೆ ಎಂದಿರುವ ದಾಖಲೆಯು,ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಹೊಸ ಆರಂಭ,ಕಾರ್ಪೊರೇಟ್ ತೆರಿಗೆಗಳಲ್ಲಿ ಐತಿಹಾಸಿಕ ಕಡಿತ,ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ,ಅಯೋಧ್ಯೆ ವಿವಾದಕ್ಕೆ ಶಾಂತಿಯುತ ಪರಿಹಾರ ಇತ್ಯಾದಿಗಳನ್ನು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News