ಒಲಿಂಡಾ ಪಿರೇರಾರ ಸೇವೆ ಅವಿಸ್ಮರಣೀಯ : ವಿನಯ್ ಕುಮಾರ್ ಸೊರಕೆ

Update: 2020-05-31 08:35 GMT
ವಿನಯ್ ಕುಮಾರ್ ಸೊರಕೆ

ಉಡುಪಿ: ತನ್ನ ಜೀವನದುದ್ದಕ್ಕೂ ತ್ಯಾಗ ಮತ್ತು ಸೇವೆಯೇ ಪ್ರಮುಖವೆಂದು ಜೀವನ ನಡೆಸಿದ್ದ ಒಲಿಂಡಾ ಪಿರೇರಾ ಅವರ ನಿಧನಕ್ಕೆ ಅವರ ನಿಕಟವರ್ತಿ, ಕರ್ನಾಟಕ ಸರ್ಕಾರದ ಮಾಜಿ ಸಚಿವ, ವಿನಯ್ ಕುಮಾರ್ ಸೊರಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

"ರೋಶನಿ ನಿಲಯ" ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೇರಿಸಿದ್ದ, ಸಾಮಾಜಿಕ-ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಮೂಲಕ ಸಮಾಜಕ್ಕೆ ಮತ್ತು ಮನುಕುಲಕ್ಕೆ ಅತಿ ದೊಡ್ಡ ಕೊಡುಗೆಯನ್ನು ನೀಡಿರುವ ಒಲಿಂಡಾ ಪಿರೇರಾ  ಅವರು ನಿಧನರಾಗಿರುವುದು ಬಹಳ ದುಃಖ ತಂದಿದೆ.ಅವರಿಂದ ವಿದ್ಯಾಭ್ಯಾಸ ಪಡೆದಿರುವ ಅನೇಕರು ಇಂದು ಉನ್ನತ ಸ್ಥಾನಮಾನಗಳನ್ನು, ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ.

ತನ್ನ ಇಳಿವಯಸ್ಸಿನಲ್ಲಿಯೂ ಶಿಕ್ಷಣ ಸಂಸ್ಥೆ, ವೃದ್ಧಾಶ್ರಮ, ಮರೆಗುಳಿ ರೋಗದ ಬಗ್ಗೆ ಅರಿವು ಮೂಡಿಸುವ ಕೆಲಸ ಅಲ್ಲದೆ ಸಮುದಾಯ ಆರೋಗ್ಯ, ಬಡತನ, ಗ್ರಾಮೀಣ ಜನರ ಬದುಕು ಇವೆಲ್ಲದರ ಬಗ್ಗೆ ಕಾಳಜಿ, ಆಸಕ್ತಿ ವಹಿಸಿ ಜನಸೇವೆ ಗೈಯುತ್ತಿದ್ದರು. ಇಂತಹ ತ್ಯಾಗಮಯೀ, ಸೇವಾ ಮನೋಭಾವದಿಂದ ಜೀವಿಸಿದ ಮಾನವತಾವಾದಿ ಮಹಿಳೆಯ ವಿದ್ಯಾರ್ಥಿಯಾಗಿದ್ದುದು ನನಗೆ ಬಹಳ ಹೆಮ್ಮೆಯೆನಿಸುತ್ತದೆ. ಆದರೆ, ಸಮಾಜ ಯಾವತ್ತೂ ಮರೆಯಲಾಗದ ಘನತೆ-ಗೌರವದ, ಅನುಕರಣೀಯ ಜೀವನವನ್ನು ಜೀವಿಸಿದ ಮಹಾನ್ ತ್ಯಾಗಮಯೀ, ಸೇವಾಮನೋಭಾವದ ಜನಸೇವಕಿ ಭಗವಂತನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿರುವುದು ಇಡೀ ಸಮಾಜಕ್ಕೆ ಬಹು ದೊಡ್ಡ ನಷ್ಟ ಇವರ ಮರಣ ವಾರ್ತೆ ಕೇಳಿ ಅತೀವ ದುಃಖಿತನಾಗಿದ್ದೇನೆ. ಅವರ ಕುಟುಂಬ ವರ್ಗ, ವಿದ್ಯಾರ್ಥಿ ವೃಂದ ಹಾಗೂ ಅಪಾರ ಅಭಿಮಾನಿ, ಅನುಯಾಯಿಗಳಿಗೆ ಪರಮಾತ್ಮನು ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News