ಉಡುಪಿ: ಮಹಾರಾಷ್ಟ್ರದ 9, ದೋಹಾದಿಂದ ಬಂದ ಒಬ್ಬರಲ್ಲಿ ಪಾಸಿಟಿವ್

Update: 2020-05-31 14:36 GMT

ಉಡುಪಿ, ಮೇ 31: ದೋಹಾ ಕತರ್‌ನಿಂದ ಆಗಮಿಸಿದ 31 ವರ್ಷದ ಯುವಕ ಹಾಗೂ ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ ಆಗಮಿಸಿದ 9 ಮಂದಿ ಸೇರಿದಂತೆ ಒಟ್ಟು 10 ಮಂದಿ ರವಿವಾರ ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ.

ಇವರಲ್ಲಿ 7 ಮಂದಿ ಪುರುಷರು, ಇಬ್ಬರು ಮಹಿಳೆಯರು ಹಾಗೂ 7 ವರ್ಷ ಪ್ರಾಯ ಬಾಲಕಿ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇದರಿಂದ ಜಿಲ್ಲೆಯಲ್ಲೀಗ ಒಟ್ಟು 187 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾದಂತಾಗಿದ್ದು, ಜಿಲ್ಲೆ ಈಗ ರಾಜ್ಯದಲ್ಲಿ ಆರನೇ ಸ್ಥಾನದಲ್ಲಿದೆ. ನಿನ್ನೆಯಂತೆ ಇಂದು ಸಹ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ 14 ಮಂದಿ  ಯನ್ನು ಬಿಡುಗಡೆ ಗೊಳಿಸಲಾಗಿದೆ.

ಈ ಮೂಲಕ ಸೋಂಕಿಗೆ ಪಾಸಿಟಿವ್ ಬಂದು ಚಿಕಿತ್ಸೆಯ ನಂತರ ಬಿಡುಗಡೆ ಗೊಂಡವರ ಸಂಖ್ಯೆ ಜಿಲ್ಲೆಯಲ್ಲಿ 64ಕ್ಕೇರಿದೆ. ಇವರಲ್ಲಿ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಂಡ ಮೂವರು, ಮರುಪರೀಕ್ಷೆಯಲ್ಲಿ ನೆಗೆಟಿವ್ ಬಂದ ಇಬ್ಬರು, ನಿನ್ನೆ ಬಿಡುಗಡೆಗೊಂಡ 45 ಮಂದಿ ಹಾಗೂ ಇಂದಿನ 14 ಮಂದಿ ಸೇರಿದ್ದಾರೆ. ಈಗ ಜಿಲ್ಲೆಯಲ್ಲಿ ಒಟ್ಟು 122 ಸಕ್ರಿಯ ಪ್ರಕರಣಗಳಿದ್ದು, ಇವರು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲೆಯ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.

ಇಂದು 62 ವರ್ಷ, 24, 31, 36, 45, 32 ಹಾಗೂ 30 ಪುರುಷರಲ್ಲಿ, 31 ಮತ್ತು 42 ವರ್ಷ ಪ್ರಾಯದ ಮಹಿಳೆಯರಲ್ಲಿ ಅಲ್ಲದೇ 7 ವರ್ಷದ ಬಾಲಕಿ ಯಲ್ಲಿ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಕುಂದಾಪುರ ತಾಲೂಕಿಗೆ ಸೇರಿದವರು ಹಾಗೂ ಎಲ್ಲರೂ ಇತ್ತೀಚೆಗೆ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಗೊಂಡು ಮನೆಗೆ ತೆರಳಿದವರು ಎಂದು ಡಾ.ಭಟ್ ತಿಳಿಸಿದರು.

1501 ಸ್ಯಾಂಪಲ್ ಸಂಗ್ರಹ: ರವಿವಾರ ಜಿಲ್ಲೆಯಲ್ಲಿ 1501ಮಂದಿಯ ಗಂಟಲುದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವುಗಳಲ್ಲಿ 1481 ಮಾದರಿಗಳು ಕೊರೋನ ಹಾಟ್‌ಸ್ಪಾಟ್‌ಗಳಿಂದ ಬಂದವರಿಂದ ಸಂಗ್ರಹಿಸ ಲಾಗಿದೆ. ಉಳಿದಂತೆ ಉಸಿರಾಟದ ತೊಂದರೆಯಿಂದ ಬಳಲುತಿದ್ದ ಒಬ್ಬರು ಹಾಗೂ ಶೀತಜ್ವರದಿಂದ ಬಳಲುತಿದ್ದ 19 ಮಂದಿಯ ಮಾದರಿಯನ್ನೂ ಸಂಗ್ರಹಿಸಲಾಗಿದೆ ಎಂದು ಡಾ.ಭಟ್ ತಿಳಿಸಿದರು.

ಈ ಮೂಲಕ ಈವರೆಗೆ ಸಂಗ್ರಹಿಸಿದ ಗಂಟಲುದ್ರವದ ಮಾದರಿಗಳ ಸಂಖ್ಯೆ ಈಗ 12,502ಕ್ಕೇರಿದೆ. ಇವುಗಳಲ್ಲಿ ರವಿವಾರದವರೆಗೆ ಒಟ್ಟು 5245ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 5058 ನೆಗೆಟಿವ್ ಆಗಿದ್ದರೆ, ಇಂದಿನ ಹತ್ತು ಸೇರಿದಂತೆ ಒಟ್ಟು 187 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 7257 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದು ಅವರು ಹೇಳಿದರು.

154 ನೆಗೆಟಿವ್: ಕೋವಿಡ್ -19 ಸೋಂಕಿನ ಪರೀಕ್ಷೆಗಾಗಿ ಕಳುಹಿಸಲಾದ ಶಂಕಿತರ ಗಂಟಲು ದ್ರವದ ಮಾದರಿಗಳಲ್ಲಿ ರವಿವಾರ ಒಟ್ಟು 154 ವರದಿಗಳು ನೆಗೆಟಿವ್ ಆಗಿವೆ. ಅಲ್ಲದೇ ಸೋಂಕಿನ ಪರೀಕ್ಷೆಗಾಗಿ ಇಂದು 9 ಮಂದಿ ಐಸೋಲೇಶನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರೆಲ್ಲರೂ ಪುರುಷರು. ಒಬ್ಬರು ಕೊರೋನ ಶಂಕಿತರು, ಐವರು ತೀವ್ರತರದ ಉಸಿರಾಟ ತೊಂದರೆಯವರು ಹಾಗೂ ಮೂವರು ಶೀತಜ್ವರದ ಬಾಧೆಯ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಾಗಿ ದ್ದಾರೆ. ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು ನಾಲ್ವರು ಬಿಡುಗಡೆಗೊಂಡಿದ್ದು, 69 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ಐವರು ಇಂದು ನೊಂದಣಿ ಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 4941 ಮಂದಿಯನ್ನು ಕೊರೋನ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. 3869 ಮಂದಿ (ಇಂದು 83) 28 ದಿನಗಳ ನಿಗಾವಣೆ ಹಾಗೂ 4769 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗ ಕೇವಲ 39 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 135 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 64 ಮಂದಿ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News