ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ: ಸಿಡಿಲು ಬಡಿದು ಕರು ಸಹಿತ ಮೂರು ದನ ಸಾವು

Update: 2020-05-31 16:38 GMT

ಉಡುಪಿ, ಮೇ 31: ಅರಬೀ ಸಮುದ್ರದಲ್ಲಿನ ವಾಯುಭಾರ ಕುಸಿತದ ಪರಿಣಾಮ ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಕುಂದಾಪುರ ತಾಲೂಕಿನಲ್ಲಿ ಸಿಡಿಲು ಬಡಿದು ಮೂರು ಜಾನುವಾರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಉಡುಪಿ ತಾಲೂಕಿನಲ್ಲಿ 17.7 ಮೀ.ಮೀ., ಕುಂದಾಪುರ- 23.0 ಮೀ.ಮೀ., ಕಾರ್ಕಳ -8 ಮೀ.ಮೀ. ಹಾಗೂ ಜಿಲ್ಲೆಯಲ್ಲಿ ಸರಾಸರಿ 13.7 ಮೀ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮೇ 31ರಂದು ಸಂಜೆ ವೇಳೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಕಮ್ಗೋಳಿ ಎಂಬಲ್ಲಿರುವ ಸಂತೋಷ್ ಎಂಬವರ ಮನೆಯ ಕೊಟ್ಟಿಗೆಯ ವಿದ್ಯುತ್‌ಗೆ ಸಿಡಿಲು ಬಡಿದ ಪರಿಣಾಮ, ಕೊಟ್ಟಿಗೆಯಲ್ಲಿದ್ದ ಎರಡು ದನ ಮತ್ತು ಒಂದು ಕರು ಸ್ಥಳದಲ್ಲಿಯೇ ಮೃತಪಟ್ಟಿದೆ. ಇದರಿಂದ ಸುಮಾರು ಒಂದು ಲಕ್ಷ ರೂ. ನಷ್ಟ ಆಗಿರುವುದಾಗಿ ಅಂದಾಜಿಸಲಾಗಿದೆ. ಸ್ಥಳಕ್ಕೆ ಹೆಂಗವಳ್ಳಿ ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೇ ರೀತಿ ಮೇ 31ರ ನಸುಕಿನ ವೇಳೆ ಕುಂದಾಪುರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಲ್ಲದೆ ಇಂದು ರಾತ್ರಿ ವೇಳೆಯೂ ಉಡುಪಿ ನಗರ ಸಹಿತ ಜಿಲ್ಲೆಯ ಹಲವು ಕಡೆ ಉತ್ತಮ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News