ಭಾರತ-ಚೀನಾ ಯೋಧರ ‘ಘರ್ಷಣೆ’ ವಿಡಿಯೋ ಅಧಿಕೃತವಲ್ಲ: ಭಾರತೀಯ ಸೇನೆ ಸ್ಪಷ್ಟನೆ

Update: 2020-05-31 17:20 GMT

ಹೊಸದಿಲ್ಲಿ, ಮೇ 31: ಪೂರ್ವ ಲಡಾಖ್‌ನಲ್ಲಿ ಭಾರತೀಯ ಹಾಗೂ ಚೀನಿ ಯೋಧರ ನಡುವೆ ಘರ್ಷಣೆ ನಡೆದಿರುವಂತೆ ತೋರಿಸಿರುವ ‘ಹಿಂಸಾತ್ಮಕ’ ವಿಡಿಯೋದಲ್ಲಿನ ದೃಶ್ಯಗಳು ‘ಅಧಿಕೃತವಾದುದಲ್ಲ’ ಎಂದು ಭಾರತೀಯ ಸೇನೆ ರವಿವಾರ ಸ್ಪಷ್ಟಪಡಿಸಿದೆ. ಗಡಿಯಲ್ಲಿನ ಪ್ರಸಕ್ತ ಪರಿಸ್ಥಿತಿಯ ಜೊತೆ ಈ ವೀಡಿಯೊವನ್ನು ಥಳಕು ಹಾಕುವ ಪ್ರಯತ್ನವು ದುರುದ್ದೇಶದಿಂದ ಕೂಡಿದೆಯೆಂದು ಅವರು ಹೇಳಿದ್ದಾರೆ.

ಈಶಾನ್ಯ ಲಡಾಕ್‌ನ ಪಾಂಗೊಂಗ್ ತ್ಸೊ ನದಿಯ ದಡದಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಕಾದಾಟ ನಡೆದಿರುವ ಹಾಗೆ ವಿಡಿಯೋದಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತದೆ.

ಗಡಿಯಲ್ಲಿನ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಪ್ರಸಕ್ತ, ಅಂತಹ ಯಾವುದೇ ಹಿಂಸಾಚಾರ ನಡೆದಿಲ್ಲ. ಉಭಯದೇಶಗಳ ನಡುವೆ ಗಡಿ ನಿರ್ವಹಣೆ ಕುರಿತ ಶಿಷ್ಟಾಚಾರಗಳಿಗೆ ಅನುಗುಣವಾಗಿ ಮಿಲಿಟರಿ ಕಮಾಂಡರ್‌ಗಳ ಮಾತುಕತೆಗಳನ್ನು ನಡೆಸಿ ಭಿನ್ನಾಭಿಪ್ರಾಯಗಳಿಗೆ ಸ್ಪಂದಿಸಲಾಗಿದೆ ಎಂದವರು ಹೇಳಿದರು.

ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರುವಂತಹ ವಿಷಯಗಳನ್ನು ಅತಿರಂಜಿತಗೊಳಿಸುವ ಪ್ರಯತ್ನಗಳನ್ನು ಸೇನೆಯು ಪ್ರಬಲವಾಗಿ ಖಂಡಿಸುತ್ತದೆ ಎಂದು ಆನಂದ್ ತಿಳಿಸಿದರು. ಗಡಿಯ ಪ್ರಸಕ್ತ ಪರಿಸ್ಥಿತಿಯನ್ನು ಹದಗೆಡಿಸುವ ಸಾಧ್ಯತೆ ಇರುವಂತಹ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಅವರು ಮಾಧ್ಯಮಗಳಿಗೆ ಮನವಿ ಮಾಡಿದರು.

ಹಮ್ವಿ ಮಾದರಿಯ ವಾಹನದಲ್ಲಿ ಆಗಮಿಸಿದ ಚೀನಿ ಯೋಧರು, ಭಾರತೀಯ ಸೇನಾ ಯೋಧರು ಹಾಗೂ ಭಾರತ-ಟಿಬೆಟ್ ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ಭಾರತದ ಗಸ್ತು ತಂಡದ ಜೊತೆ ಕಾದಾಟ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಚೀನಾವು ಲಡಾಕ್‌ಗೆ ತಾಗಿಕೊಂಡಿರುವ ತನ್ನ ಗಡಿ ಭಾಗದಲ್ಲಿ 5 ಸಾವಿರ ಸೈನಿಕರನ್ನು ಜಮಾವಣೆಗೊಳಿಸಿದ್ದು, ಟ್ಯಾಂಕ್‌ಗಳು ಹಾಗೂ ಫಿರಂಗಿ ಗುಂಡುಗಳನ್ನು ನಿಯೋಜಿಸಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News