ಉ.ಪ್ರದೇಶದಲ್ಲಿ ಮಹಿಳಾ ಐಎಎಸ್ ಅಧಿಕಾರಿ, ಸಹೋದರಿಗೆ ರಾಡ್ ನಿಂದ ಹಲ್ಲೆ: ಆರೋಪ

Update: 2020-06-01 10:54 GMT

ಚಂಡೀಗಢ: ಉತ್ತರ ಪ್ರದೇಶದ ಗಾಝಿಯಾಬಾದ್‍ನ ಹುಟ್ಟೂರಲ್ಲಿ ತನ್ನ ಹಾಗೂ ಸೋದರಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಹರ್ಯಾಣ ಕೇಡರ್‍ನ ಮಹಿಳಾ ಐಎಎಸ್ ಅಧಿಕಾರಿ ರಾಣಿ ನಗರ್ ಎಂಬವರು ಆರೋಪಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ವಿಷ್ಣು ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಆತ ಟ್ಯಾಕ್ಸ್ ಕನ್ಸಲ್ಟೆಂಟ್ ಎಂದು ತಿಳಿದು ಬಂದಿದೆ.

ಬೀದಿ ನಾಯಿಯೊಂದಕ್ಕೆ ವ್ಯಕ್ತಿಯೊಬ್ಬ ಹೊಡೆಯುತ್ತಿರುವುದನ್ನು ತಾವು ಆಕ್ಷೇಪಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಯಿತು ಎಂದೂ ಐಎಎಸ್ ಅಧಿಕಾರಿ ದೂರಿದ್ದಾರೆ.

ವಿಷ್ಣು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ತನ್ನ ಮನೆಗೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಅಲ್ಲಿ ರಾಣಿ ಮತ್ತು ಆಕೆಯ ಸೋದರಿ ನೀಮಾ ನಡೆದುಕೊಂಡು ಹೋಗುತ್ತಿದ್ದರು. ಆಗ ವಿಷ್ಣು ನಾಯಿಗಳಿಗೆ ಒಂದೋ ಗದರಿಸಿರಬೇಕು ಇಲ್ಲವೇ ಹೊಡೆದಿರಬೇಕು. ಇದನ್ನು  ಸೋದರಿಯರು ಪ್ರತಿಭಟಿಸಿದಾಗ ಆರೋಪಿ ರೀಮಾಳನ್ನು ಹಿಡಿದು ಆಕೆಯನ್ನು ನೆಲಕ್ಕೆ ಬೀಳಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗೆ ರವಿವಾರವೇ ಜಾಮೀನು ದೊರಕಿದೆ.

ಘಟನೆ ನಡೆದ ಬೆನ್ನಲ್ಲೇ ಮಹಿಳಾ ಐಎಎಸ್ ಅಧಿಕಾರಿ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ತಮ್ಮ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ ನಡೆಸಲಾಗಿತ್ತು. ತಾನು ಬಚಾವಾದರೂ ಸೋದರಿಯ ಕಾಲಿಗೆ ಗಾಯವಾಗಿದೆ ಎಂದು ಹೇಳಿದ್ದಾರಲ್ಲದೆ ಘಟನೆಯ ಸಿಸಿಟಿವಿ ಚಿತ್ರಗಳನ್ನೂ ಶೇರ್ ಮಾಡಿದ್ದಾರೆ.

2014ನೇ ಬ್ಯಾಚಿನ ಅಧಿಕಾರಿಯಾಗಿರುವ ರಾಣಿ ನಗರ್ ಈ ಹಿಂದೆಯೂ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಿಸಿದ್ದರಲ್ಲದೆ, ಮೇ 4ರಂದು ತಾವು ರಾಜೀನಾಮೆ ನೀಡುವ ಕುರಿತಂತೆ ಫೇಸ್ ಬುಕ್‍ನಲ್ಲಿ ಘೋಷಿಸಿ ಸುದ್ದಿಯಾಗಿದ್ದರು. ಆದರೆ ಹರ್ಯಾಣ ಸರಕಾರ ಆಕೆಯ ರಾಜೀನಾಮೆಯನ್ನು ಅಂಗೀಕರಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News