ಸಂಕಷ್ಟದಲ್ಲಿರುವ ನೂರಾರು ವಲಸೆ ಕಾರ್ಮಿಕರಿಗೆ ಫೋನ್ ಮೂಲಕ ಸಹಾಯ ಮಾಡುತ್ತಿರುವ ಆತಿಫುಲ್ ಹುಸೈನ್

Update: 2020-06-01 12:19 GMT

ಗುವಾಹಟಿ: ಅಸ್ಸಾಂ ರಾಜ್ಯದ 26 ವರ್ಷದ ಯುವಕ ಆತಿಫುಲ್ ಹುಸೈನ್ ಅವರನ್ನು ‘ಏಕ ವ್ಯಕ್ತಿ ಕಾಲ್ ಸೆಂಟರ್’ ಎಂದರೂ ತಪ್ಪಾಗದು. ಲಾಕ್ ಡೌನ್‍ನಿಂದ ಅತಂತ್ರರಾಗಿರುವ ನೂರಾರು ವಲಸಿಗ ಕಾರ್ಮಿಕರಿಗೆ ಅವರು ಕೇವಲ ಫೋನ್ ಮೂಲಕವೇ ಸಹಾಯ ಮಾಡಿದ್ದಾರೆ. ಅಸ್ಸಾಂನ ಬರ್ಪೇಟ ಜಿಲ್ಲೆಯವರಾದ ಆತಿಫುಲ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ.

ಲಾಕ್ ಡೌನ್ ಜಾರಿಯಾದ ಕೆಲವೇ ದಿನಗಳಲ್ಲಿ ತಮ್ಮ ಗ್ರಾಮದ ಹಲವಾರು ಮಂದಿ ಹರ್ಯಾಣದಲ್ಲಿ ಅತಂತ್ರರಾಗಿದ್ದಾರೆಂದು ಅವರಿಗೆ ತಿಳಿದು ಬಂದಿತ್ತು. ಅವರಿಗೆ ಕರೆ ಮಾಡಿದಾಗ ಅವರು ಆಹಾರವಿಲ್ಲದೆ ಪರಿತಪಿಸುತ್ತಿದ್ದರು ಎಂದು ತಿಳಿದು ಬಂದ ಕೂಡಲೇ ಹರ್ಯಾಣದಲ್ಲಿರುವ ಕೆಲ ಎನ್‍ಜಿಒಗಳನ್ನು ಅವರು ಸಂಪರ್ಕಿಸಿದ ಪರಿಣಾಮ ಆ ಕಾರ್ಮಿಕರಿಗೆ 24 ಗಂಟೆಗಳಲ್ಲಿ ರೇಷನ್ ಸಾಮಗ್ರಿ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು.

ಮರುದಿನ ಹುಸೈನ್ ಅವರ ಮೊಬೈಲ್ ಫೋನ್‍ಗೆ ನೊಯ್ಡಾದಿಂದ ಕಾರ್ಮಿಕರ ಕರೆ ಬಂದಾಗ ಅವರು ತಕ್ಷಣ ಅಲ್ಲಿನ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದರು. ಈ ಕಾರ್ಮಿಕರಿಗೂ ಸಹಾಯ ದೊರಕಿತ್ತು. ಅಂದಿನಿಂದ ಹುಸೈನ್ ಅವರ ಮೊಬೈಲ್ ಫೋನ್‍ಗೆ ದೇಶದ ವಿವಿಧೆಡೆಗಳಿಂದ ಕರೆಗಳು ಬರುತ್ತಿವೆ. ಆರಂಭದಲ್ಲಿ ತಮಗೆ ಬಂದ ಎಲ್ಲಾ ಕರೆಗಳ ವಿವರಗಳನ್ನು ತಮ್ಮ ಡೈರಿಯಲ್ಲಿ ಅವರು ಬರೆದಿಡುತ್ತಿದ್ದರು . ಆದರೆ ಈಗ ಬರೆದೂ ಬರೆದೂ ಡೈರಿಯ ಪುಟಗಳು ಬರಿದಾಗಿವೆ. ಅವರಿಂದ ಸಹಾಯ ಯಾಚಿಸಿ ಅವರಿಗೆಷ್ಟು ಕರೆಗಳು ಬಂದಿರಬಹುದೆಂದು ಅಂದಾಜಿಸಬಹುದು.

ಎರಡು ವರ್ಷಗಳ ಹಿಂದೆ ಕಾನೂನು ಪದವಿ ಪಡೆದ ನಂತರ ಅವರು ಅಸ್ಸಾಂನಲ್ಲಿ ಎನ್‍ಆರ್‍ಸಿಯಿಂದ ಸಮಸ್ಯೆಗೊಳಗಾದವರಿಗೆ ತಮ್ಮ ಎನ್‍ಜಿಒ ‘ಇನ್ಸಾಫ್’ ಮೂಲಕ ಸಹಾಯ ಮಾಡುತ್ತಿದ್ದರು.

ಇದೀಗ ಲಾಕ್ ಡೌನ್‍ನಿಂದಾಗಿ ಸಂತ್ರಸ್ತರಾಗಿರುವ ಕನಿಷ್ಠ 2,000 ಮಂದಿಗೆ ಅವರು ಸಹಾಯ ಮಾಡಲು ಯಶಸ್ವಿಯಾಗಿದ್ದಾರೆ. ಅವರ ಫೋನ್‍ನಲ್ಲಿ ಅವರಿಗೆ ಕರೆ ಮಾಡಿದವರನ್ನು ಕೇರಳ, ನೊಯ್ಡಾ, ಮಹಾರಾಷ್ಟ್ರ ಎಂದೇ ಬರೆದು ಅವರು ನೆನಪಿನಲ್ಲಿಡಲು ಪ್ರಯತ್ನಿಸುತ್ತಾರೆ.

ತಮ್ಮಲ್ಲಿ ಸಹಾಯ ಕೋರಿ ಕರೆ ಮಾಡುವವರನ್ನು ಸರಿಯಾದ ಜನರ ಜತೆ ಸಂಪರ್ಕ ಕಲ್ಪಿಸುವುದಷ್ಟೇ ತನ್ನ ಕೆಲಸ ಎಂದು ಹೇಳುವ ಅವರು ತಮಗೆ ಕರೆ ಮಾಡಿದವರು ಎಲ್ಲಿಯವರು, ಯಾವ ಸ್ಥಳದವರು ಎಂದು ತಿಳಿದ ನಂತರ ಅಲ್ಲಿನ ಪೊಲೀಸ್ ಠಾಣೆಯನ್ನು ಗುರುತಿಸಿ  ಫೋನ್ ಕರೆ ಮಾಡಿ ಸೂಕ್ತ ಏರ್ಪಾಟು ಮಾಡಲು ಮನವಿ ಮಾಡುತ್ತಾರೆ.

ಈಗ ಶ್ರಮಿಕ್ ರೈಲುಗಳು ವಲಸಿಗ ಕಾರ್ಮಿಕರನ್ನು ಊರಿಗೆ ವಾಪಸ್ ಕರೆದುಕೊಂಡು ಹೋಗುತ್ತಿದ್ದರೂ ಹಲವರಿಗೆ ಅವುಗಳ ಬಗ್ಗೆ ಸೂಕ್ತ ಮಾಹಿತಿಯಿಲ್ಲದೇ ಇದ್ದಾಗ ಇವರಿಗೆ ಕರೆ ಮಾಡಿ ಮಾಹಿತಿ ಪಡೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News