ವಿದೇಶಗಳಲ್ಲಿರುವ ಭಾರತೀಯರ ಜೊತೆ ಮಾತುಕತೆ: ಐಒಸಿ ಗ್ಲೋಬಲ್ ಲೈವ್ ಕಾನ್ಫರೆನ್ಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

Update: 2020-06-01 13:04 GMT

ನ್ಯೂಯಾರ್ಕ್ : ಇಂಡಿಯನ್ ಓವರ್‍ಸೀಸ್ ಕಾಂಗ್ರೆಸ್ ಮೇರಾ ಭಾರತ್ ಮಹಾನ್ ಎನ್‍ಆರ್‍ಐ ಸರಣಿಯ ಭಾಗವಾಗಿ ಕೆಪಿಸಿಸಿ ಎನ್‍ಆರ್ ಐ ಘಟಕದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹಾಗೂ ಬಹರೈನ್ ಐಒಸಿ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಅವರ ಸಹಯೋಗದೊಂದಿಗೆ ಇತ್ತೀಚೆಗೆ ಫೇಸ್‍ಬುಕ್ ಲೈವ್ ಗ್ಲೋಬಲ್ ಕಾನ್ಫರೆನ್ಸ್ ಆಯೋಜಿಸಲಾಗಿತ್ತು.

ಒಂದೂವರೆ ಗಂಟೆಗಳ ಕಾಲ ನಡೆದ ಈ ನೇರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ವಿದೇಶಗಳಲ್ಲಿರುವ ಭಾರತೀಯರ ಜೊತೆ ಮಾತುಕತೆ ನಡೆಸಿದರು. ಈ ನೇರ ಪ್ರಸಾರ ಕಾರ್ಯಕ್ರಮವನ್ನು  ಸುಮಾರು ಮೂರು ಲಕ್ಷ ಮಂದಿ ಜಗತ್ತಿನಾದ್ಯಂತ ವೀಕ್ಷಿಸಿದ್ದಾರೆ.

ಐಒಸಿ ಅಧ್ಯಕ್ಷ ಸ್ಯಾಮ್ ಪಿತ್ರೋಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಗತ ಭಾಷಣ ಮಾಡಿದರು. ಎಐಸಿಸಿ ಕಾರ್ಯದರ್ಶಿ ಹಿಮಾಂಶು ವ್ಯಾಸ್,  ಐಒಸಿಯ ಅಮೆರಿಕಾ ಘಟಕದ ಅಧ್ಯಕ್ಷ ಮೊಹಿಂದರ್ ಸಿಂಗ್ ಗಿಲ್ಝಿಯಾನ್ ಹಾಗೂ ಆರತಿ ಕೃಷ್ಣ ಈ ಸಂದರ್ಭ ಮಾತನಾಡಿದರು.

ಐಒಸಿಯ ನೂರಾರು ಸದಸ್ಯರು ಕೇಳಿದ ಹಲವು ಪ್ರಶ್ನೆಗಳಿಗೆ ಡಿ ಕೆ ಶಿವಕುಮಾರ್ ಉತ್ತರಿಸಿದರು. ಈ ಸಂದರ್ಭ ಅವರು, ಭಾರತದ ಪ್ರಸಕ್ತ ರಾಜಕೀಯ ಸ್ಥಿತಿಗತಿ ಹಾಗೂ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರಕಾರ ತೋರಿಸುತ್ತಿರುವ `ನಿರ್ಲಕ್ಷ್ಯ' ಹಾಗೂ ದೇಶದಲ್ಲಿನ ಲಾಕ್‍ಡೌನ್ ಕುರಿತಂತೆ ಮಾತನಾಡಿದರು.

ಪ್ರಸಕ್ತ ಸನ್ನಿವೇಶದಲ್ಲಿ ಒಂದು ಉತ್ತಮ ಹಾಗೂ ಜವಾಬ್ದಾರಿಯುತ ವಿಪಕ್ಷವಾಗಿ ಕಾಂಗ್ರೆಸ್ ಪಕ್ಷ ಹೇಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂಬುದನ್ನೂ ಅವರು ವಿವರಿಸಿದರು.

ಈ ಸಂದರ್ಭ ಐಒಸಿ ಗ್ಲೋಬಲ್ ಐಟಿ ಸೆಲ್ ಅಧ್ಯಕ್ಷ ಮನೋಜ್ ಶಿಂಧೆ, ಧನಂಜಯ್ , ವಿನಯ್, ಐಒಸಿ ಅಮೆರಿಕಾ ಘಟಕದ ಅಧ್ಯಕ್ಷ ಮೊಹಿಂದರ್, ಕರ್ನಾಟಕ ಘಟಕದ ಅಧ್ಯಕ್ಷ ಗೌರಿ ಶಂಕರ್ ಐಒಸಿಯ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ  ಕೆಪಿಸಿಸಿ ನಾಯಕರು, ಡಿ ಕೆ ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ಅಲ್ತಾಫ್,  ಕೆಪಿಸಿಸಿ ಐಟಿ ಸೆಲ್  ಉಸ್ತುವಾರಿ ಎ ಎನ್ ನಟರಾಜ್ ಗೌಡ ಉಪಸ್ಥಿತರಿದ್ದರು.

ಐಒಸಿ ಬಹ್ರೈನ್ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಅವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News