“ನನ್ನ ಹೊಟೇಲ್ ಸುಟ್ಟರೆ ಸುಡಲಿ, ವಂಚಿತರಿಗೆ ನ್ಯಾಯ ಸಿಗಬೇಕು”

Update: 2020-06-01 17:31 GMT

ಮಿನಪೊಲಿಸ್ (ಅಮೆರಿಕ), ಜೂ. 1: ಜಾರ್ಜ್ ಫ್ಲಾಯ್ಡ್ ಸಾವನ್ನು ಪ್ರತಿಭಟಿಸಿ ಕಳೆದ ವಾರ ಮಿನಪೊಲಿಸ್‌ನಲ್ಲಿ ನಡೆದ ಪ್ರದರ್ಶನಗಳ ವೇಳೆ ಹಾನಿಗೀಡಾಗಿರುವ ಕಟ್ಟಡಗಳ ಪೈಕಿ ಭಾರತೀಯ ರೆಸ್ಟೋರೆಂಟ್ ಕೂಡ ಒಂದು. ಮಿನಪೊಲಿಸ್ ಪೊಲೀಸ್ ಠಾಣೆಯಿಂದ ಅನತಿ ದೂರದಲ್ಲಿ ‘ಗಾಂಧಿ ಮಹಲ್’ ಕಟ್ಟಡವಿದೆ. ಪ್ರತಿಭಟನಕಾರರು ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಕೊಟ್ಟ ಬೆಂಕಿ ಸಮೀಪದ ಭಾರತೀಯ ರೆಸ್ಟೋರೆಂಟ್‌ಗೂ ಹಬ್ಬಿದೆ.

ಆದರೆ, ಇದಕ್ಕೆ ರೆಸ್ಟೋರೆಂಟ್‌ನ ಭಾರತೀಯ ಮೂಲದ ಮಾಲೀಕರು ನೀಡಿರುವ ಪ್ರತಿಕ್ರಿಯೆ ಇಂಟರ್‌ನೆಟ್‌ನಲ್ಲಿ ಭಾರೀ ಶ್ಲಾಘನೆಗೆ ಪಾತ್ರವಾಗಿದೆ.

 ‘‘ನಾವು ಇದರಿಂದ ಎದೆಗುಂದುವುದಿಲ್ಲ. ಗಾಂಧಿ ಮಹಲನ್ನು ರಕ್ಷಿಸಲು ನಮ್ಮ ನೆರೆಕರೆಯವರು ತುಂಬಾ ಪ್ರಯತ್ನಿಸಿದ್ದಾರೆ. ಅದಕ್ಕೆ ನಾವು ಆಭಾರಿಯಾಗಿದ್ದೇವೆ. ನಿಮ್ಮ ಪ್ರಯತ್ನಗಳನ್ನು ನಾವು ಗುರುತಿಸಿದ್ದೇವೆ’’ ಎಂದು ಮಾಲೀಕ ರುಹೆಲ್ ಇಸ್ಲಾಮ್‌ರ 18 ವರ್ಷದ ಮಗಳು ಹಫ್ಸಾ ಇಸ್ಲಾಮ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಅದು ಈಗ ವೈರಲ್ ಆಗಿದೆ.

‘‘ನಮ್ಮ ಬಗ್ಗೆ ಚಿಂತೆ ಮಾಡಬೇಡಿ. ನಾವು ಅದನ್ನು ಮರುನಿರ್ಮಿಸುತ್ತೇವೆ ಹಾಗೂ ಚೇತರಿಸಿಕೊಳ್ಳುತ್ತೇವೆ’’ ಎಂದು ಅವರು ಹೇಳಿದ್ದಾರೆ.

ತನ್ನ ತಂದೆಯ ಬಗ್ಗೆ ಮಾತನಾಡಿರುವ ಅವರು, ‘‘ನನ್ನ ಹೊಟೇಲ್ ಉರಿಯಲಿ, ನ್ಯಾಯ ವಂಚಿತರಿಗೆ ನ್ಯಾಯ ಸಿಗಬೇಕು. ಆ ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಹಾಕಬೇಕು ಎಂಬುದಾಗಿ ನನ್ನ ತಂದೆ ಫೋನ್‌ನಲ್ಲಿ ಮಾತನಾಡಿರುವುದನ್ನು ನಾನು ಕೇಳಿದ್ದೇನೆ’’ ಎಂದು ಹೇಳಿದ್ದಾರೆ.

‘‘ಗಾಂಧಿ ಮಹಲ್‌ಗೆ ನಿನ್ನೆ ರಾತ್ರಿ ಬೆಂಕಿ ಬಿದ್ದಿರಬಹುದು. ಆದರೆ ನಮ್ಮ ಸಮುದಾಯವನ್ನು ರಕ್ಷಿಸುವ ಮತ್ತು ಅದರ ಬೆಂಬಲಕ್ಕೆ ಧಾವಿಸುವ ನಮ್ಮ ಅದಮ್ಯ ತುಡಿತ ಎಂದಿಗೂ ಸಾಯುವುದಿಲ್ಲ! ಎಲ್ಲರಿಗೂ ನೆಮ್ಮದಿ ಲಭಿಸಲಿ’’ ಎಂದು ಹಫ್ಸಾ ಹೇಳಿದ್ದಾರೆ.

ಅವರ ಈ ಪೋಸ್ಟ್ 27,000ಕ್ಕೂ ಅಧಿಕ ಬಾರಿ ಶೇರ್ ಆಗಿದೆ ಹಾಗೂ ಲಕ್ಷಾಂತರ ಜನರ ಹೃದಯವನ್ನು ತಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News