ಜಾರ್ಜ್ ಫ್ಲಾಯ್ಡ್ ಹತ್ಯೆ: ಮೊಣಕಾಲೂರಿ ಪ್ರತಿಭಟನಕಾರರಿಗೆ ಅಮೆರಿಕದಾದ್ಯಂತ ಬೆಂಬಲ ಸೂಚಿಸಿದ ಪೊಲೀಸರು

Update: 2020-06-01 15:32 GMT

ವಾಷಿಂಗ್ಟನ್: ಅಮೆರಿಕದ ಮಿನಪೊಲಿಸ್ ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ಕರಿಯ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಂದ ಪ್ರಕರಣದ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿರುವ ಜನರಿಗೆ ನ್ಯೂಯಾರ್ಕ್ ನ ಹಲವು ಪೊಲೀಸ್ ಸಿಬ್ಬಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ನ್ಯೂಯಾರ್ಕ್ ನ ಹಲವು ಪೊಲೀಸರು ಮೊಣಕಾಲೂರಿ ಪ್ರತಿಭಟನಕಾರರನ್ನು ಬೆಂಬಲಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ರನ್ನು ಬಂಧಿಸುವಾಗ ಅವರ ಕುತ್ತಿಗೆಯ ಮೇಲೆ ಮೊಣಕಾಲೂರಿ ನಿಂತಿದ್ದ ಪೊಲೀಸ್ ಅಧಿಕಾರಿ ಫ್ಲಾಯ್ಡ್ ಸಾವಿಗೆ ಕಾರಣನಾಗಿದ್ದ. ಈಗಾಗಲೇ ಈ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ ಹಾಗೂ ಆತನ ವಿರುದ್ಧ ಮೂರನೇ ದರ್ಜೆ ಕೊಲೆ ಆರೋಪವನ್ನು ಹೊರಿಸಲಾಗಿದೆ.

ಮಿನಿಯಾಪೊಲೀಸ್ ನ ಅಧಿಕಾರಿಗಳ ವರ್ತನೆ ಅಸ್ವೀಕಾರಾರ್ಹ ಎಂದು ಅಮೆರಿಕಾದಾದ್ಯಂತ ಹಲವು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಹ್ಯೂಸ್ಟನ್ ನ ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೆಡೋ, “ಜಾರ್ಜ್ ಫ್ಲಾಯ್ಡ್ ತ ಕೊಲೆಯನ್ನು ಕಾನೂನು ಮತ್ತು ಸಮುದಾಯ ಖಂಡಿಸಬೇಕು” ಎಂದಿದ್ದಾರೆ.

ಫ್ಲಾಯ್ಡ್ ರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ ನಡೆದ ಜಾಥಾದಲ್ಲಿ ಭಾಗವಹಿಸಿದ ಅವರು, “ಪ್ರತಿಭಟನೆಗಳು ನನಗೆ ಅರ್ಥವಾಗುತ್ತಿದೆ ಮತ್ತು ಈ ಘಟನೆಯನ್ನು ಸಮಸ್ಯೆಯಾಗಿ ಕಾಣದ ಅಮೆರಿಕನ್ನರ ಬಗ್ಗೆ ಸಿಟ್ಟು ಬರುತ್ತಿದೆ. ಜನರು ಕೋಪಗೊಂಡಾಗ ನಮಗೆ ಭಯವಾಗುವುದಿಲ್ಲ, ಏಕೆಂದರೆ ಜನರು ಕೋಪಗೊಂಡಾಗ ನಾವೂ ಅವರೊಂದಿಗೆ ಸೇರುತ್ತೇವೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News