ಕೆಲವರೇಕೆ ಎಡಗೈ ಬಳಸುತ್ತಾರೆ? ವಿಜ್ಞಾನಿಗಳು ಏನೆನ್ನುತ್ತಾರೆ? ನಿಮಗೆ ಗೊತ್ತೇ?

Update: 2020-06-01 17:49 GMT

 ಜಗತ್ತಿನಲ್ಲಿ ಕೇವಲ ಶೇ.10ರಷ್ಟು ಜನರು ತಮ್ಮೆಲ್ಲ ಕಾರ್ಯಗಳಿಗೂ ಎಡಗೈಯನ್ನೇ ಬಳಸುತ್ತಾರೆ, ಅಂದರೆ ಎಡಚರಾಗಿರುತ್ತಾರೆ. ಅದೇಕೋ ಜನರು ಎಡಚರು ಯಾವುದೋ ಅಪರಾಧವನ್ನು ಮಾಡಿರುವ ಬಗೆಯಲ್ಲಿ ಅವರನ್ನು ನೋಡುತ್ತಾರೆ. ಇದು ಕೆಲ ಎಡಚರಲ್ಲಿ ಕೀಳರಿಮೆಯನ್ನು ಮೂಡಿಸುತ್ತದೆ. ಅದೇನೇ ಇರಲಿ,ಎಡಗೈ ಬಳಸುವವರು ತಮ್ಮ ವಿಶಿಷ್ಟ ರಚನಾತ್ಮಕತೆಯಿಂದ ಶತಮಾನಗಳಿಂದಲೂ ಇತಿಹಾಸ ನಿರ್ಮಿಸುತ್ತ ಬಂದಿದ್ದಾರೆ ಎನ್ನುವುದು ಸುಳ್ಳಲ್ಲ.

 ಜನರು ಎಡಚರಾಗುವುದು ಏಕೆ ಎನ್ನುವುದನ್ನು ತಿಳಿದುಕೊಳ್ಳಲು ಬಹಳಷ್ಟು ವಿಶ್ಲೇಷಣೆಗಳು ನಡೆದಿವೆ. ವಂಶವಾಹಿಗಳು ಮತ್ತು ಡಿಎನ್‌ಎಯಿಂದಾಗಿ ಜನರು ಎಡಗೈಯನ್ನು ಬಳಸಲು ಆರಂಭಿಸುತ್ತಾರೆ ಎಂದು ಕೆಲವು ಸಂಶೋಧನೆಗಳು ತೋರಿಸಿವೆ. ವಾಸ್ತವದಲ್ಲಿ ನವಜಾತ ಶಿಶುಗಳು ಆರು ತಿಂಗಳು ಪ್ರಾಯದಿಂದಲೇ ಎಡಗೈಯನ್ನು ಬಳಸಲು ಆರಂಭಿಸುತ್ತವೆ ಮತ್ತು ನಂತರ ಇದೇ ಅಭ್ಯಾಸವಾಗಿ ಬಿಡುತ್ತದೆ. ಕೆಲಮಟ್ಟಿಗೆ ಆನುವಂಶಿಕತೆಯೂ ಇದಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ತಂದೆ ಅಥವಾ ತಾಯಿ ಎಡಚರಾಗಿದ್ದರೆ ಮಗುವೂ ಎಡಗೈ ಬಳಸಬಹುದು.

 ಎಡಗೈಯನ್ನು ಬಳಸುವವರು ಸಾಕಷ್ಟು ಸೃಜನಶೀಲರಾಗಿರುತ್ತಾರೆ. ಅವರು ಅಸಾಧಾರಣವಾಗಿ ಸಂಗೀತವನ್ನು ನುಡಿಸಬಲ್ಲರು,ಒಳ್ಳೆಯ ಚಿತ್ರಗಳನ್ನು ರಚಿಸುತ್ತಾರೆ ಮತ್ತು ಉತ್ತಮ ಕಲಾವಿದರೂ ಆಗಿರುತ್ತಾರೆ. ಇಷ್ಟು ಮಾತ್ರವಲ್ಲ,ಅವರು ಒಳ್ಳೆಯ ವಾಸ್ತುಶಿಲ್ಪಿಗಳೂ ಆಗಿರುತ್ತಾರೆ. ಕ್ರಿಕೆಟ್ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿ ಎಡಚರಾಗಿರುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಎಡಗೈಯನ್ನು ಬಳಸುವವರು ಬಾಕ್ಸಿಂಗ್,ಟೆನ್ನಿಸ್‌ನಂತಹ ಕ್ರೀಡೆಗಳಲ್ಲಿ ಹೆಚ್ಚು ಮಿಂಚುತ್ತಾರೆ.

  ಎಡಚರು ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿರುತ್ತಾರೆ. ನ್ಯೂಯಾರ್ಕ್‌ನ ಸೇಂಟ್ ಲಾರೆನ್ಸ್ ವಿವಿಯ ಅಧ್ಯಯನದಂತೆ ಬಲಗೈ ಬಳಸುವವರಿಗೆ ಹೋಲಿಸಿದರೆ ಎಡಗೈ ಬಳಸುವವರು 140ಕ್ಕೂ ಹೆಚ್ಚಿನ ಐಕ್ಯೂ ಮಟ್ಟವನ್ನು ಹೊಂದಿರುತ್ತಾರೆ.

  ಎಡಗೈಯಿಂದ ಕೆಲಸ ಮಾಡುವವರು ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ ಮತ್ತು ಅವರ ಕೈಗಳು ಅದ್ಭುತ ವೇಗವನ್ನು ಹೊಂದಿರುತ್ತವೆ. ಬಲಗೈ ಬಳಸುವವರಿಗೆ ಹೋಲಿಸಿದರೆ ಎಡಚರು ಮಿದುಳಿನ ಆಘಾತದಂತಹ ಸಮಸ್ಯೆಗಳಿಂದ ತ್ವರಿತವಾಗಿ ಚೇತರಿಸಿಕೊಳ್ಳುತ್ತಾರೆ. ತ್ವರಿತವಾಗಿ ಬದಲಾಗುವ ಧ್ವನಿಯನ್ನು ಅವರು ಸುಲಭವಾಗಿ ಆಲಿಸಬಲ್ಲರು.

 ಅಂದ ಹಾಗೆ ಎಡಚರಿಗೆ ತಮ್ಮದೇ ಆದ ಸಮಸ್ಯೆಗಳಿವೆ. ಶಾಲಾಕಾಲೇಜುಗಳಲ್ಲಿಯ ಡೆಸ್ಕ್,ಬೆಂಚು ಮತ್ತು ಖುರ್ಚಿಗಳು ಬಲಗೈ ಬಳಸುವವರಿಗಾಗಿ ತಯಾರಾಗಿರುವುದರಿಂದ ಅದರಲ್ಲಿ ಕುಳಿತು ಬರೆಯುವುದು ಎಡಚರಿಗೆ ಸುಲಭವಲ್ಲ. ಸ್ಪೈರಲ್ ಬೌಂಡ್ ಕಾಪಿಗಳ ಮೇಲೆ ಬರೆಯುವುದಂತೂ ತೀರ ಕಠಿಣವಾಗುತ್ತದೆ. ಕತ್ತರಿಗಳು ಮತ್ತು ಟಿನ್ ಓಪನರ್‌ಗಳು ಅವರಿಗೆ ಸವಾಲನ್ನೊಡ್ಡುತ್ತವೆ.

ಸಾಮಾನ್ಯವಾಗಿ ಕಚೇರಿಗಳಲ್ಲಿ ಕಂಪ್ಯೂಟರ್‌ನ ವೌಸ್ ಬಲಬದಿಯಲ್ಲಿರುತ್ತದೆ ಮತ್ತು ಎಡಚರು ಪ್ರತಿ ಸಲವೂ ಅದನ್ನು ತಮ್ಮ ಎಡಬದಿಗೆ ಮಾಡಿಕೊಳ್ಳಬೇಕಾಗುತ್ತದೆ. ಗಿಟಾರ್‌ನ್ನು ನಡೆಸುವುದು ಎಡಚರಿಗೆ ಅಷ್ಟು ಸುಲಭವಲ್ಲ. ಇತರ ಯಾವುದೇ ವ್ಯಕ್ತಿಯೊಂದಿಗೆ ಕೈಜೋಡಿಸುವ ಮುನ್ನ ಅವರು ಆಲೋಚಿಸುತ್ತಾರೆ ಮತ್ತು ಹೆಚ್ಚಿನ ಸಲ ಅಭ್ಯಾಸಬಲದಿಂದಾಗಿ ಎಡಗೈಯನ್ನೇ ಮುಂದಕ್ಕೆ ಚಾಚುತ್ತಾರೆ.

ಟಚ್‌ಸ್ಕ್ರೀನ್ ಮೊಬೈಲ್ ಅಥವಾ ಐಪಾಡ್‌ನಲ್ಲಿ ಟೈಪ್ ಮಾಡುವುದು ಎಡಚರಿಗೆ ಕಷ್ಟವಾಗುತ್ತದೆ. ಕ್ರೆಡಿಟ್ ಕಾರ್ಡ್ ಮತ್ತು ಸ್ವೈಪ್ ಮಷಿನ್‌ಗಳು ಬಲಗೈ ಬಳಸುವವರಿಗಾಗಿಯೇ ತಯಾರಾಗುವುದರಿಂದ ಅವುಗಳ ಬಳಕೆಯೂ ಎಡಚರಿಗೆ ಸುಲಭವಲ್ಲ. ಇಂಕ್ ಪೆನ್‌ಗಳಿಂದ ಬರೆಯುವುದೂ ಅವರಿಗೆ ಕಷ್ಟವಾಗುತ್ತದೆ. ಜನರು ಎಡಚರನ್ನು ಭೇಟಿಯಾದಾಗ ಓಹ್,ನೀವು ಲೆಫ್ಟಿಯಾ ಎಂದು ಅಚ್ಚರಿಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಇದು ಎಡಚರಲ್ಲಿ ತಾನು ಪ್ರತ್ಯೇಕವೇನೋ ಎಂಬ ಭಾವನೆಯನ್ನು ಮೂಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News