ಉಪ್ಪಿನಂಗಡಿ: ಕಾಲುದಾರಿ ಊರ್ಜಿತದಲ್ಲಿರಿಸುವಂತೆ ಒತ್ತಾಯಿಸಿ ಗ್ರಾಪಂ, ಶಾಸಕರಿಗೆ ಮನವಿ

Update: 2020-06-02 07:48 GMT

ಉಪ್ಪಿನಂಗಡಿ, ಜೂ.2: ಇಲ್ಲಿನ ಬಸ್ ನಿಲ್ದಾಣದಿಂದ ಸಾರ್ವಜನಿಕ ಗ್ರಂಥಾಲಯ, ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮ ಪಂಚಾಯತ್ ವಸತಿ ಗೃಹ ಸಂಪರ್ಕದ ಕಾಲುದಾರಿಯನ್ನು ಊರ್ಜಿತದಲ್ಲಿ ಇರಿಸುವಂತೆ ಕೋರಿ ಸ್ಥಳೀಯ ಸಾರ್ವಜನಿಕರು ಶಾಸಕರು ಮತ್ತು ಉಪ್ಪಿನಂಗಡಿ ಗ್ರಾಪಂಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

 ಇಲ್ಲಿನ ಬಸ್ ನಿಲ್ದಾಣದ ಸನಿಹದಿಂದ ಗ್ರಾಪಂ ಸ್ವಂತ ಹಕ್ಕಿನ ಜಾಗದಲ್ಲಿ ಗ್ರಾಪಂ ವಸತಿ ಗೃಹ, ಗ್ರಾಮಕರಣಿಕರ ವಸತಿ ಗೃಹ, ಕಂದಾಯ ನಿರೀಕ್ಷಕರ ಕಚೇರಿ ಇದೆ, ಅದಾಗ್ಯೂ ಸಾರ್ವಜನಿಕ ಗ್ರಂಥಾಲಯವೂ ಇರುತ್ತದೆ, ಅದಾಗ್ಯೂ ಈ ರಸ್ತೆಯ ಮೂಲಕ ಅಂಚೆ ಕಚೇರಿ, ಹಳೆ ಬಸ್ ನಿಲ್ದಾಣ, ವಾಣಿಜ್ಯ ಸಮುಚ್ಚಯ ಸಂಪರ್ಕಕ್ಕೂ ಹತ್ತಿರದ ದಾರಿಯಾಗಿ ಸಹಕಾರಿ ಆಗಿರುತ್ತದೆ.
ಅನಾದಿ ಕಾಲದಿಂದಲೂ ಇರುವ ಈ ರಸ್ತೆಯ ಮೂಲಕವೇ ಶಾಲಾ, ಕಾಲೇಜು ಮಕ್ಕಳು ಗ್ರಂಥಾಲಯಕ್ಕೆ ಹೋಗುತ್ತಿದ್ದು, ಅದಾಗ್ಯೂ ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮ ಪಂಚಾಯತ್‌ವಸತಿ ಗೃಹಕ್ಕೆ ಹೋಗುವ ಸಾರ್ವಜನಿಕರಿಗೂ ಇದು ಉಪಯುಕ್ತ ರಸ್ತೆ ಆಗಿ ಬಳಕೆ ಆಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಾಹನ ದಟ್ಟನೆಯಿಂದ ಮುಕ್ತಿ:  ದೂರದ ಗ್ರಾಮಗಳಿಂದ ಬಂದ ಮಂದಿ ಬಸ್ ನಿಲ್ದಾಣದಲ್ಲಿ ಇಳಿದು ಮುಖ್ಯ ರಸ್ತೆಯಾಗಿ ಹೋಗುವಾಗ ಅತಿಯಾದ ವಾಹನ ದಟ್ಟನೆ ಕಾಡುತ್ತಿದ್ದು, ಈ ನಿಟ್ಟಿನಲ್ಲಿಯೂ ಹೆಂಗಸರು, ವೃದ್ಧರು, ವಿದ್ಯಾರ್ಥಿಗಳು ಈ ಕಾಲು ರಸ್ತೆಯ ಮೂಲಕ ಹಾದು ಹೋಗುತ್ತಿದ್ದು, ಈ ರಸ್ತೆ ಈ ರೀತಿಯಾಗಿಯೂ ಸಾರ್ವಜನಿಕರಿಗೆ ಉಪಯುಕ್ತವಾಗಿದೆ. ಆದ ಕಾರಣ ಸಾರ್ವಜನಿಕರು ಈ ರಸ್ತೆಯನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದಾಗಿ ಸದ್ರಿ ರಸ್ತೆಯಲ್ಲಿ ಇರುವ ಗೇಟು ತೆರವುಗೊಳಿಸಿ, ಇಂಟರ್‌ಲಾಕ್ ಅಳವಡಿಸಿ ಸ್ವಚ್ಛ ರಸ್ತೆಯನ್ನಾಗಿ ಮಾರ್ಪಾಡು ಮಾಡಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕಾಗಿ ಸಾರ್ವಜನಿಕರು ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.

 ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ನಿಯೋಗದಲ್ಲಿ ಉಪ್ಪಿನಂಗಡಿ ಪರಿಸರದ ನಿವಾಸಿಗಳಾದ ಹರೀಶ್, ಶೇಖರ್, ರಮೇಶ್, ಸಿದ್ದೀಕ್, ಮುಸ್ತಫ ಮತ್ತಿತರರು ಇದ್ದು, ಶಾಸಕರು ಮತ್ತು ಗ್ರಾಮ ಪಂಚಾಯತ್‌ಗೆ ನೀಡಿರುವ ಮನವಿಯಲ್ಲಿ 50ಕ್ಕೂ ಅಧಿಕ ಮಂದಿ ಸಹಿ ಹಾಕಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News