ಪರೀಕ್ಷಾ ಕೇಂದ್ರಕ್ಕೆ ತೆರಳಲು ಒಬ್ಬ ವಿದ್ಯಾರ್ಥಿನಿಗಾಗಿ 70 ಆಸನಗಳ ದೋಣಿಯ ವ್ಯವಸ್ಥೆ ಮಾಡಿದ ಕೇರಳ

Update: 2020-06-02 12:35 GMT
PHOTO: twitter.com

ಆಲಪ್ಪುಳ: ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೇರಳ ಜಲ ಸಾರಿಗೆ ಇಲಾಖೆಯ 70 ಆಸನಗಳ ದೋಣಿಯಲ್ಲಿ 17 ವರ್ಷದ ಬಾಲಕಿಯನ್ನು ಎರಡು ಬಾರಿ ಕರೆದೊಯ್ದು, 11ನೇ ತರಗತಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಯಾಂಡ್ರಾ ಬಾಬು ಎಂಬ ಈ ಬಾಲಕಿ ಆಲಪ್ಪುಳ ಜಿಲ್ಲೆಯ ಕುಟ್ಟಂಡ್ ಎಂಬಲ್ಲಿ ವಾಸವಾಗಿದ್ದಾಳೆ. ಆಕೆ ಕೊಟ್ಟಾಯಂ ಜಿಲ್ಲೆಯ ಕಂಜೀರಂ ಎಂಬಲ್ಲಿ ಶುಕ್ರವಾರ ಹಾಗೂ ಶನಿವಾರ ಪರೀಕ್ಷೆಗೆ ಹಾಜರಾಗಬೇಕಿತ್ತು. ಈ ಭಾಗದ ಜನರಿಗೆ ದೋಣಿಯೊಂದೇ ಸಂಚಾರ ಸಾಧನ. ಕೋವಿಡ್-19 ಹರಡುವಿಕೆ ತಡೆಗೆ ಜಾರಿಯಾದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇದನ್ನೂ ಸ್ಥಗಿತಗೊಳಿಸಲಾಗಿತ್ತು. ಕುಟ್ಟಂಡ್ ಪ್ರದೇಶ ಇಡೀ ಭಾರತದಲ್ಲೇ ಅತಿ ತಗ್ಗು ಪ್ರದೇಶವಾಗಿದ್ದು, ಸಮುದ್ರಮಟ್ಟದಿಂದ 1.2 ಮೀಟರ್‍ನಿಂದ 3.0 ಮೀಟರ್ ಆಳದಲ್ಲಿ ಇಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತದೆ.

ಸ್ಯಾಂಡ್ರಾ ಪೋಷಕರು ದಿನಗೂಲಿಗಳಾಗಿದ್ದು, ಪರೀಕ್ಷೆಗೆ ಮಗಳನ್ನು ಕರೆದೊಯ್ಯುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಇಲಾಖೆಯನ್ನು ಸಂಪರ್ಕಿಸಿದಾಗ ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಇಲಾಖೆ ಮರು ಯೋಚಿಸದೇ ಸಹಾಯಹಸ್ತ ಚಾಚಲು ಮುಂದಾಯಿತು ಎಂದು ಕೆಎಸ್‍ಡಬ್ಲ್ಯುಟಿಡಿ ನಿರ್ದೇಶಕ ಶಾಜಿ ವಿ.ನಾಯರ್ ಹೇಳಿದ್ದಾರೆ. ಆದರೆ ಇದರಲ್ಲಿ ಎರಡು ಸಮಸ್ಯೆಗಳಿದ್ದವು. ಒಂದು ಎರಡು ಜಿಲ್ಲೆಗಳ ನಡುವೆ ವಿದ್ಯಾರ್ಥಿನಿ ಪ್ರಯಾಣಿಸಬೇಕಿತ್ತು. ಆಕೆಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಹಾಗೂ ವಾಪಾಸು ಮನೆಗೆ ಕರೆತರಲು ಸಾಮಾನ್ಯ ಮಾರ್ಗದಿಂದ ವಿಮುಖವಾಗಿ ಹೋಗಬೇಕಿತ್ತು. ಆದರೂ ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಆಕೆಗೆ ನೆರವು ನೀಡಲಾಗಿತು ಎಂದು ವಿವರಿಸಿದರು.

ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಕೂಡಾ ಇದಕ್ಕೆ ಬೆಂಬಲ ನೀಡಿದರು. ಸಾಮಾನ್ಯವಾಗಿ ಈ ವಿದ್ಯಾರ್ಥಿನಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಜಾಗಕ್ಕೆ ಬರಲು ಮತ್ತೊಂದು ದೋಣಿ ಅವಲಂಬಿಸಬೇಕಾಗಿತ್ತು. ಆದರೆ ಆಕೆಯ ಮನೆಯ ಬಳಿಗೆ ದೋಣಿ ಕಳುಹಿಸಿ, ಕರೆತರುವ ಜವಾಬ್ದಾರಿಯನ್ನು ಐದು ಮಂದಿಯ ತಂಡಕ್ಕೆ ವಹಿಸಲಾಯಿತು. ಆ ಜಾಗಕ್ಕೆ ಐದು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಬಂದ ಬಾಲಕಿಯನ್ನು ಕರೆದೊಯ್ದು, ಪರೀಕ್ಷೆ ಮುಗಿಸಿದ ಬಳಿಕ ಮನೆಯ ಬಳಿ ತಂದು ಬಿಡಲಾಯಿತು ಎಂದು ನಾಯರ್ ಹೇಳಿದರು. ಉಚಿತವಾಗಿ ಈ ಸೇವೆ ಒದಗಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ, ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ವಿಧಿಸುವ ದರವನ್ನಷ್ಟೇ ಪಡೆಯಲಾಗಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News